Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹೊಸ ಅಧ್ಯಕ್ಷರಾಗಿ ಮಾಜಿ ಸಿಇಸಿ ರಾಜೀವ್ ಕುಮಾರ್ ನೇಮಕ!

Spread the love

ಮುಂಬೈ: ಮಾಜಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ), ಮಾಜಿ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾ‌ರ್ ಅವರನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯು ರಾಜೀವ್ ಕುಮಾ‌ರ್ ಅವರನ್ನು ಜೂನ್ 30, 2026ರಿಂದ ನಾಲ್ಕು ವರ್ಷಗಳ ಅವಧಿಗೆ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲು ಅನುಮೋದನೆ ನೀಡಿದೆ ಎಂದು ಬ್ಯಾಂಕ್ ತಿಳಿಸಿದೆ. ನೈತಿಕ ಕಾರಣಗಳನ್ನು ಉಲ್ಲೇಖಿಸಿ ಕಳೆದ ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದ ಅತನು ಚಕ್ರವರ್ತಿ ಅವರ ಸ್ಥಾನಕ್ಕೆ ಅವರು ನೇಮಕವಾಗಲಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅನುಮೋದನೆಗೆ ಒಳಪಟ್ಟು, ಮೂರು ವರ್ಷಗಳ ಅವಧಿಗೆ ಬ್ಯಾಂಕ್‌ನ ಅರೆಕಾಲಿಕ ಅಧ್ಯಕ್ಷರಾಗಿ ರಾಜೀವ್‌ ಕುಮಾ‌ರ್ ಅವರನ್ನು ನೇಮಿಸಲು ನಿರ್ದೇಶಕರ ಮಂಡಳಿಯು ಅನುಮೋದನೆ ನೀಡಿದೆ. ಆರ್‌ಬಿಐ ಅನುಮೋದನೆಯ ದಿನಾಂಕದಿಂದ ಈ ನೇಮಕ ಜಾರಿಗೆ ಬರಲಿದೆ.
ರಾಜೀವ್ ಕುಮಾ‌ರ್ ಅವರು ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿ (2017-20) ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಪುನರುಜ್ಜಿವನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರು ಅಧಿಕಾರ ವಹಿಸಿಕೊಂಡಾಗ, ಸಾರ್ವಜನಿಕ ವಲಯದ ಬ್ಯಾಂಕುಗಳು ಹೆಚ್ಚಿನ ಪ್ರಮಾಣದ ಅನುತ್ಪಾದಕ ಆಸ್ತಿಗಳು (NPA), ಬಂಡವಾಳದ ಕೊರತೆ, ಆಡಳಿತಾತ್ಮಕ ಸವಾಲುಗಳು ಮತ್ತು ಹಣಕಾಸು ವಂಚನೆಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದವು.

ಅವರು ಅಧಿಕಾರ ವಹಿಸಿಕೊಂಡ 15 ದಿನಗಳಲ್ಲೇ ಸುಮಾರು 3.38 ಲಕ್ಷ ಶೆಲ್ ಕಂಪೆನಿಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2019 ಜಾರಿಗೆ ತರಲಾಗಿತ್ತು ಹಾಗೂ ಪೋಂಜಿ ಯೋಜನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿತ್ತು.
ಎನ್‌ಪಿಎಗಳ ಪಾರದರ್ಶಕ ಗುರುತಿಸುವಿಕೆ ಮತ್ತು ಮೀಸಲು ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಮೂಲಕ ಹಾಗೂ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಅಡಿಯಲ್ಲಿ ಸಾಲಗಾರರ ಹೊಣೆಗಾರಿಕೆಯನ್ನು ಜಾರಿಗೊಳಿಸುವ ಮೂಲಕ ಬ್ಯಾಂಕುಗಳ ಹಣಕಾಸು ಸ್ಥಿತಿಯನ್ನು ಸುಧಾರಿಸುವ ಕ್ರಮಗಳನ್ನು ಅವರು ಕೈಗೊಂಡಿದ್ದರು.

ಅವರ ಅಧಿಕಾರಾವಧಿಯಲ್ಲಿ 50 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಸಾಲಗಳಿಗೆ ಪಾಸ್‌ಪೋರ್ಟ್ ವಿವರಗಳನ್ನು ಕಡ್ಡಾಯಗೊಳಿಸಲಾಗಿತ್ತು. 250 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಸಾಲಗಳಿಗೆ ವಿಶೇಷ ಮೇಲ್ವಿಚಾರಣೆ ವ್ಯವಸ್ಥೆ ಜಾರಿಗೆ ತರಲಾಗಿತ್ತು. 34ಕ್ಕೂ ಹೆಚ್ಚು ಮಾನದಂಡಗಳ ಆಧಾರದ ಮೇಲೆ ಮಾಹಿತಿ ತಂತ್ರಜ್ಞಾನ ಆಧಾರಿತ ಅಪಾಯ ಮೌಲ್ಯಮಾಪನ ವ್ಯವಸ್ಥೆಯನ್ನೂ ಅನುಷ್ಠಾನಗೊಳಿಸಲಾಗಿತ್ತು.
ಸಾರ್ವಜನಿಕ ವಲಯದ ಬ್ಯಾಂಕುಗಳ ಪುನರುಜ್ಜಿವನಕ್ಕಾಗಿ 3 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮರುಬಂಡವಾಳ ಹೂಡಿಕೆ ಮಾಡಲಾಗಿತ್ತು. ಅಲ್ಲದೆ, 27 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು 12 ಘಟಕಗಳಾಗಿ ವಿಲೀನಗೊಳಿಸುವ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ‘ಒಂದು ರಾಜ್ಯ-ಒಂದು ಆರ್‌ಆರ್‌ಬಿ’ ಮಾದರಿಯಲ್ಲಿ ಪುನರ್‌ರಚಿಸಲಾಗಿತ್ತು.

ಜುಲೈ 2019ರಲ್ಲಿ ಹಣಕಾಸು ಕಾರ್ಯದರ್ಶಿಯಾಗಿ ನೇಮಕಗೊಂಡ ರಾಜೀವ್ ಕುಮಾರ್ ಅವರು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಆಡಳಿತ, ಅಪಾಯ ನಿರ್ವಹಣೆ ಮತ್ತು ನಿಯಂತ್ರಣ ವ್ಯವಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದ್ದರು.
2020ರ ಸೆಪ್ಟೆಂಬರ್ 1ರಂದು ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅವರು, 2022ರ ಮೇ 15ರಂದು ಭಾರತದ 25ನೇ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು. ಅವರ ಅಧಿಕಾರಾವಧಿಯಲ್ಲಿ ಯುವ ಮತದಾರರ ನೋಂದಣಿ, ಮತದಾರ ಸ್ನೇಹಿ ಸುಧಾರಣೆಗಳು ಹಾಗೂ ಚುನಾವಣಾ ಪ್ರಕ್ರಿಯೆಯ ಸುಧಾರಣೆಗೆ ಸಂಬಂಧಿಸಿದ ಹಲವು ಕ್ರಮಗಳನ್ನು ಜಾರಿಗೊಳಿಸಲಾಗಿತ್ತು.
2024ರ ಲೋಕಸಭಾ ಚುನಾವಣೆಯನ್ನು ಅವರು ಮೇಲ್ವಿಚಾರಣೆ ಮಾಡಿದ್ದರು. ತಮ್ಮ ವಿದಾಯ ಭಾಷಣದಲ್ಲಿ ನಗರ ಪ್ರದೇಶಗಳಲ್ಲಿ ಮತದಾನದ ಬಗ್ಗೆ ಕಂಡುಬರುತ್ತಿರುವ ನಿರಾಸಕ್ತಿ ಆತಂಕಕಾರಿ ಎಂದು ಹೇಳಿದ್ದ ಅವರು, ವಲಸಿಗರು ಮತ್ತು ಅನಿವಾಸಿ ಭಾರತೀಯರಿಗೆ ದೂರದಸ್ಥಳಗಳಿಂದಲೇ ಮತದಾನ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.
ರಾಜೀವ್ ಕುಮಾ‌ರ್ ಅವರು ಬ್ಯಾಂಕ್‌ನ ಇತರ ನಿರ್ದೇಶಕರು ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *