ಬೆಂಗಳೂರು: ಮಗನಿಗೆ ಶಾಲಾ ಪ್ರವೇಶ ನಿರಾಕರಣೆ; ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ತಾಯಿ!

ಬೆಂಗಳೂರು: 10ನೇ ತರಗತಿ ವಿದ್ಯಾರ್ಥಿಯನ್ನು ಅಮಾನತುಗೊಳಿಸಿ, ಮರುಪ್ರವೇಶಕ್ಕೆ ಶಾಲೆ ನಿರಾಕರಿಸಿದ ಹಿನ್ನಲೆಯಲ್ಲಿ ನೊಂದ ತಾಯಿಯೊಬ್ಬಳು ಶಾಲೆಯ ಶೌಚಾಲಯದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾರಾತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

10ನೇ ತರಗತಿ ವಿದ್ಯಾರ್ಥಿ ಮತ್ತು 9ನೇ ತರಗತಿ ವಿದ್ಯಾರ್ಥಿಯ ನಡುವೆ ಶಾಲೆಯಲ್ಲಿ ಜಗಳ ನಡೆದಿತ್ತು. ಬಳಿಕ ಇಬ್ಬರೂ ಶಾಲೆಯ ಹೊರಗೆ ಹೋಗಿ ಪರಸ್ಪರ ಹಲ್ಲೆ ನಡೆಸಿದ್ದು, ಇಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಘಟನೆ ಬಳಿಕ ಎರಡು ಕುಟುಂಬಗಳು ಮಾತುಕತೆ ನಡೆಸಿ ಪರಸ್ಪರ ರಾಜಿ ಮಾಡಿಕೊಂಡಿದ್ದವು. ಬಳಿಕ 10ನೇ ತರಗತಿ ವಿದ್ಯಾರ್ಥಿಯ ತಾಯಿ ಸುಮಿತ್ರಾ ಅವರು ವೈದ್ಯಕೀಯ ವೆಚ್ಚವನ್ನೂ ಭರಿಸಿದ್ದರು. ಆದರೆ ಆಸ್ಪತ್ರೆಯಿಂದ ಘಟನೆ ಕುರಿತು ಮಾಹಿತಿ ಪಡೆದ ಶಾಲೆಯ ಆಡಳಿತ ಮಂಡಳಿ, ಕ್ರಮವನ್ನು ಕೇವಲ 10ನೇ ತರಗತಿ ವಿದ್ಯಾರ್ಥಿಯ ವಿರುದ್ಧ ಮಾತ್ರ ಕೈಗೊಂಡು ಅಮಾನತುಗೊಳಿಸಿತು ಎಂದು ಕುಟುಂಬ ಆರೋಪಿಸಿದೆ.
ಘಟನೆಯ ಬಳಿಕ ಎರಡು ವಾರಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿಗೆ ಶಾಲೆಗೆ ಮರಳಲು ಅವಕಾಶ ನೀಡದೆ, ಈ ಹಿಂದೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬುದನ್ನು ದೃಢೀಕರಿಸುವ ಪ್ರಮಾಣಪತ್ರವನ್ನು ತರಬೇಕೆಂದು ಶಾಲೆ ಒತ್ತಾಯಿಸಿದೆ ಎಂದು ಹೇಳಿದ್ದಾರೆ
ಕುಟುಂಬದ ಮನವಿಯ ಮೇರೆಗೆ ಭಾರತಿನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ವಿದ್ಯಾರ್ಥಿ ಅಪ್ರಾಪ್ತನಾಗಿದ್ದು ಆತನ ವಿರುದ್ಧ ಯಾವುದೇ ಕ್ರಿಮಿನಲ್ ದಾಖಲೆ ಇಲ್ಲ ಎಂದು ತಿಳಿಸಿ, ಮತ್ತೆ ತರಗತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಬಳಿಕ ಮಗನಿಗೆ ಮರುಪ್ರವೇಶ ಕಲ್ಪಿಸುವಂತೆ ಮನವಿ ಮಾಡಲು ಸುಮಿತ್ರಾ ಅವರು ತಮ್ಮ ಪತಿಯೊಂದಿಗೆ ಸೋಮವಾರ ಶಾಲೆಗೆ ತೆರಳಿದ್ದಾರೆ. ಆದರೆ ಶಾಲೆಯ ಆಡಳಿತ ಮಂಡಳಿಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ನಡುವೆ ನೊಂದ ಸುಮಿತ್ರಾ ಅವರು ಶಾಲೆಯ ಶೌಚಾಲಯದಲ್ಲೇ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಂತರ ಹೆಚ್ಚಿನ ಚಿಕಿತ್ಸೆಗೆ ರಿಚ್ಮಂಡ್ ರಸ್ತೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.