ಮಹಾರಾಷ್ಟ್ರ ಟಿಇಟಿ ಪರೀಕ್ಷೆ ಮುಂದೂಡಿಕೆ: ಪರೀಕ್ಷೆಗೆ ಮುನ್ನವೇ ಸೋರಿಕೆಯಾದ ಪ್ರಶ್ನೆ ಪತ್ರಿಕೆ!

ಮುಂಬೈ: ಪರೀಕ್ಷೆಗೆ 24 ಗಂಟೆಗಳ ಮುನ್ನ ಮಹಾರಾಷ್ಟ್ರದ ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ವರದಿಯಾಗಿದೆ.
ಜೂನ್ 28ರಂದು ನಡೆಯಬೇಕಿದ್ದ ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (TET 2025) ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಪರೀಕ್ಷಾ ಮಂಡಳಿಯು (MSCE) ಮುಂದೂಡಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಥಾಣೆಯಲ್ಲಿ ಕಾರ್ಯಾಚರಣೆ ನಡೆಸಿ ಪ್ರಶ್ನೆ ಪತ್ರಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದ್ದು, ಅವರ ಗುರುತನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲಎಂದು ತಿಳಿದು ಬಂದಿದೆ.
ವಶಪಡಿಸಿಕೊಳ್ಳಲಾದ ಪಠ್ಯ ಸಾಮಗ್ರಿಯು TET ಪ್ರಶ್ನೆ ಪತ್ರಿಕೆಯೇ ಎಂಬ ಬಗ್ಗೆ ಶಿಕ್ಷಣ ಇಲಾಖೆಯು ಸದ್ಯ ಪರಿಶೀಲಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪರಿಶೀಲನಾ ಪ್ರಕ್ರಿಯೆಯ ಆಧಾರದ ಮೇಲೆ ಮುಂದಿನ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.
