ಫೆಲೆಸ್ತೀನ್ ಮಕ್ಕಳ ಹ*ತ್ಯಾಕಾಂಡ: ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ವರದಿಯಲ್ಲಿ ಗಂಭೀರ ಆರೋಪ!

ಜಿನೀವಾ: ಆಕ್ರಮಿತ ಫೆಲೆಸ್ತೀನಿನ ಪ್ರದೇಶಗಳಲ್ಲಿ ಇಸ್ರೇಲಿ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಉದ್ದೇಶಪೂರ್ವಕವಾಗಿ ಫೆಲೆಸ್ತೀನಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ್ದು, ಅವರ ಬಾಲ್ಯವನ್ನು ನಾಶಪಡಿಸಿವೆ. ಗಾಝಾ ಪಟ್ಟಿ, ಪೂರ್ವ ಜೆರುಸಲೆಮ್ ಸೇರಿದಂತೆ ಪಶ್ಚಿಮ ದಂಡೆಯಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳು ಹಾಗೂ ಯುದ್ಧ ಅಪರಾಧಗಳನ್ನು ಎಸಗಿವೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ವಿಚಾರಣಾ ಆಯೋಗ ತನ್ನ ಇತ್ತೀಚಿನ ವರದಿಯಲ್ಲಿ ತೀರ್ಮಾನಿಸಿದೆ.
ಭಾರತದ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಹಾಗೂ ದಿಲ್ಲಿ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಡಾ. ಎಸ್. ಮುರಳೀಧರ್ ನೇತೃತ್ವದ ಆಯೋಗವು ಮಂಗಳವಾರ 100 ಪುಟಗಳ ವರದಿಯನ್ನು ಬಿಡುಗಡೆ ಮಾಡಿತು. ಅಕ್ಟೋಬರ್ 7, 2023ರಿಂದ ಮಾರ್ಚ್ 31, 2026ರವರೆಗೆ ಆಕ್ರಮಿತ ಫೆಲೆಸ್ತೀನಿನ ಪ್ರದೇಶಗಳಲ್ಲಿ ಮಕ್ಕಳ ವಿರುದ್ಧ ನಡೆದ ಕಾನೂನಿನ ಉಲ್ಲಂಘನೆಗಳು ಮತ್ತು ಅಪರಾಧಗಳನ್ನು ವರದಿ ಪರಿಶೀಲಿಸಿದೆ.

‘ಫೆಲೆಸ್ತೀನಿನ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಆಯೋಗವು ಪುರಾವೆಗಳನ್ನು ಕಂಡುಕೊಂಡಿದೆ. ಫೆಲೆಸ್ತೀನಿನ ಮಕ್ಕಳ ವಿರುದ್ಧದ ಅಪರಾಧಗಳು ಮತ್ತು ಕಾನೂನಿನ ಉಲ್ಲಂಘನೆಗಳ ಮೇಲೆ ಮಾತ್ರ ಕೇಂದ್ರೀಕರಿಸಿದ ವಿಶ್ವಸಂಸ್ಥೆಯ ಮೊದಲ ವಿಶೇಷ ತನಿಖಾ ವರದಿ ಇದಾಗಿದೆ’ ಎಂದು ಮುರಳೀಧರ್ ಹೇಳಿದರು.
‘ಇಸ್ರೇಲಿನ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಉದ್ದೇಶಪೂರ್ವಕವಾಗಿ ಫೆಲೆಸ್ತೀನಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿ ಅವರ ಬಾಲ್ಯವನ್ನು ನಾಶಪಡಿಸಿವೆ. ಗಾಝಾ ಪಟ್ಟಿಯಲ್ಲಿ ಕಿರುಕುಳ ಸೇರಿದಂತೆ ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಯುದ್ಧ ಅಪರಾಧಗಳು ನಡೆದಿವೆ. ಪೂರ್ವ ಜೆರುಸಲೆಮ್ ಸೇರಿದಂತೆ ಪಶ್ಚಿಮ ದಂಡೆಯಲ್ಲಿಯೂ ಯುದ್ಧ ಅಪರಾಧಗಳು ಎಸಗಲ್ಪಟ್ಟಿವೆ’ ಎಂದು ವರದಿಯಲ್ಲಿ ಹೇಳಲಾಗಿದೆ.
ಅಕ್ಟೋಬರ್ 7, 2023ರಿಂದ 20 ಸಾವಿರಕ್ಕೂ ಹೆಚ್ಚು ಫೆಲೆಸ್ತೀನಿನ ಮಕ್ಕಳು ಸಾವನ್ನಪ್ಪಿದ್ದು, 44 ಸಾವಿರಕ್ಕೂ ಅಧಿಕ ಮಕ್ಕಳು ಗಾಯಗೊಂಡಿದ್ದಾರೆ. ಈ ಅವಧಿಯಲ್ಲಿ ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳಲ್ಲಿ ಸಂಭವಿಸಿದ ಒಟ್ಟು ಸಾವುಗಳಲ್ಲಿ ಸುಮಾರು ಶೇ 30ರಷ್ಟು ಮಕ್ಕಳು ಸೇರಿದ್ದಾರೆ ಎಂದು ವರದಿ ತಿಳಿಸಿದೆ.
ವೈಮಾನಿಕ ದಾಳಿಗಳು, ಕ್ವಾಡ್ಾಪ್ಟರ್ ಡೋನ್ಗಳು, ಸ್ಟೈಪರ್ ರೈಫಲ್ ಗಳು ಹಾಗೂ ಇತರ ಶಸ್ತ್ರಾಸ್ತ್ರಗಳ ಬಳಕೆಯಿಂದ ಹೆಚ್ಚಿನ ಮಕ್ಕಳು ಸಾವಿಗೀಡಾಗಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಮಕ್ಕಳ ತಲೆ ಮತ್ತು ಎದೆ ಭಾಗಗಳನ್ನು ಗುರಿಯಾಗಿಸಿ ಗುಂಡು ಹಾರಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಆಯೋಗ ಹೇಳಿದೆ.
‘ಮಕ್ಕಳನ್ನು ವ್ಯಾಪಕವಾಗಿ ಮತ್ತು ವ್ಯವಸ್ಥಿತವಾಗಿ ಕೊಲ್ಲುವ ಹಾಗೂ ಹಾನಿಗೊಳಿಸುವ ಪ್ರಕ್ರಿಯೆ ನಡೆದಿದೆ’ ಎಂದು ಮುರಳೀಧರ್ ಹೇಳಿದರು.
ಅಕ್ಟೋಬರ್ 2023ರಿಂದ ಅಕ್ಟೋಬರ್ 2025ರವರೆಗೆ ಅಂದಾಜು 58,054 ಮಕ್ಕಳು ಒಬ್ಬ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದು, ಗಾಝಾದಲ್ಲಿ ಅನಾಥ ಮಕ್ಕಳ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ ಎಂದು ವರದಿ ದಾಖಲಿಸಿದೆ.
ಶಿಕ್ಷಣ ವ್ಯವಸ್ಥೆಯ ಮೇಲೂ ದಾಳಿಯ ಪರಿಣಾಮ ಗಂಭೀರವಾಗಿದೆ. ಶಿಕ್ಷಣಕ್ಕೆ ಪ್ರವೇಶವನ್ನು ಇಸ್ರೇಲ್ ವ್ಯವಸ್ಥಿತವಾಗಿ ಅಡ್ಡಿಪಡಿಸಿದೆ ಎಂದು ಆರೋಪಿಸಿರುವ ಆಯೋಗ, ಗಾಝಾದಲ್ಲಿ ಶೇ 97ರಷ್ಟು ಶಾಲೆಗಳು ನಾಶವಾಗಿವೆ ಅಥವಾ ಹಾನಿಗೊಳಗಾಗಿವೆ ಎಂದು ಹೇಳಿದೆ. ಶೇ 95ರಷ್ಟು ವಿಶ್ವವಿದ್ಯಾಲಯಗಳು ಹಾನಿಗೊಳಗಾಗಿದ್ದು, 38 ವಿಶ್ವವಿದ್ಯಾಲಯಗಳ ಪೈಕಿ 22 ಸಂಪೂರ್ಣವಾಗಿ ಧ್ವಂಸಗೊಂಡಿವೆ ಎಂದು ವರದಿ ಉಲ್ಲೇಖಿಸಿದೆ.
ಯುದ್ಧದಿಂದ ಉಂಟಾಗಿರುವ ಮಾನವೀಯ ಬಿಕ್ಕಟ್ಟು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಿದೆ. ಆಹಾರ ಮತ್ತು ಅಗತ್ಯ ಸೌಲಭ್ಯಗಳ ಕೊರತೆಯಿಂದ ಅಕ್ಟೋಬರ್ 1, 2025ರ ವೇಳೆಗೆ 151 ಮಕ್ಕಳು ಅಪೌಷ್ಟಿಕತೆಯಿಂದ ಮೃತಪಟ್ಟಿದ್ದಾರೆ. ಅಕ್ಟೋಬರ್ನಿಂದ ಡಿಸೆಂಬರ್ 2023ರ ನಡುವಿನ ಅವಧಿಯಲ್ಲಿ 1,000ಕ್ಕೂ ಹೆಚ್ಚು ಮಕ್ಕಳು ಒಂದು ಅಥವಾ ಹೆಚ್ಚಿನ ಅಂಗಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ.
ಸಂಗ್ರಹಿಸಿದ ಪುರಾವೆಗಳ ಆಧಾರದ ಮೇಲೆ, ಗಾಝಾ ಮತ್ತು ಪಶ್ಚಿಮ ದಂಡೆಯಲ್ಲಿ ನಡೆದ ಮಾನವ ಹಕ್ಕು ಉಲ್ಲಂಘನೆಗಳು, ಕಿರುಕುಳ ಹಾಗೂ ಯುದ್ಧ ಅಪರಾಧಗಳಿಗೆ ಇಸ್ರೇಲಿ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳೇ ಹೊಣೆ ಎಂದು ಆಯೋಗ ಹೇಳಿದೆ.
‘ಇಂದು ಬಿಡುಗಡೆಯಾದ ವರದಿಯು ಫೆಲೆಸ್ತೀನ್ನಲ್ಲಿ ನರಮೇಧ ನಡೆದಿರುವ ಕುರಿತು ಆಯೋಗ ಈ ಹಿಂದೆ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದು ಮುರಳೀಧರ್ ಹೇಳಿದರು.
ಮಕ್ಕಳ ಮೇಲಿನ ದಾಳಿಗಳ ಮೂಲಕ ಫೆಲೆಸ್ತೀನ್ ಜನರ ಭವಿಷ್ಯವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ ಎಂದು ಆಯೋಗ ಹೇಳಿದೆ. ಮಕ್ಕಳು ಮತ್ತು ಗರ್ಭಿಣಿಯರ ರಕ್ಷಣೆ ಹಾಗೂ ಅವರ ಯೋಗಕ್ಷೇಮವು ಫೆಲೆಸ್ತೀನ್ ಜನರ ಅಸ್ತಿತ್ವ ಮತ್ತು ಭವಿಷ್ಯದೊಂದಿಗೆ ನೇರವಾಗಿ ಸಂಬಂಧಿಸಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ಮಕ್ಕಳನ್ನು ಗುರಿಯಾಗಿಸುವ ಮೂಲಕ ಇಸ್ರೇಲ್ ಫೆಲೆಸ್ತೀನ್ ಸಮಾಜದ ಭವಿಷ್ಯಕ್ಕೇ ಹೊಡೆತ ನೀಡುತ್ತಿದೆ. ಇದರಿಂದ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವ ಫೆಲೆಸ್ತೀನ್ ಜನರ ಸಾಮರ್ಥ್ಯ ದುರ್ಬಲಗೊಳ್ಳುತ್ತಿದೆ ಎಂದು ವರದಿ ಹೇಳಿದೆ.
ಪಶ್ಚಿಮ ದಂಡೆಯಲ್ಲಿ ನಡೆಯುತ್ತಿರುವ ವಸಾಹತುಗಾರರ ಹಿಂಸಾಚಾರವು ಇಸ್ರೇಲ್ನ ನೀತಿಗಳ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆಯೋಗ ತೀರ್ಮಾನಿಸಿದೆ. ಪ್ರದೇಶ ವಿಸ್ತರಣೆಯ ಉದ್ದೇಶದಿಂದ ರಾಜ್ಯದ ಅಧಿಕಾರಿಗಳು ಮತ್ತು ವಸಾಹತುಗಾರರ ಗುಂಪುಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅದು ಹೇಳಿದೆ.
ಅದೇ ವೇಳೆ, ಜೂನ್ 15, 2026ರಂದು ಪ್ರಕಟಿಸಿದ್ದ ವರದಿಯನ್ನು ಉಲ್ಲೇಖಿಸಿರುವ ಆಯೋಗ, ಗಾಝಾದಲ್ಲಿ ಹಮಾಸ್ ಸಂಘಟನೆಯೂ ಫೆಲೆಸ್ತೀನಿಯನ್ನರ ವಿರುದ್ಧ ದಬ್ಬಾಳಿಕೆ, ಚಿತ್ರಹಿಂಸೆ ಮತ್ತು ಕಾನೂನುಬಾಹಿರ ಹತ್ಯೆ ಸೇರಿದಂತೆ ಗಂಭೀರ ಮಾನವ ಹಕ್ಕು ಉಲ್ಲಂಘನೆಗಳನ್ನು ಎಸಗಿದೆ ಎಂದು ಪುನರುಚ್ಚರಿಸಿದೆ.
ಅಕ್ಟೋಬರ್ 2025ರ ಕದನ ವಿರಾಮದ ಬಳಿಕ ಗಾಝಾದ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ ಎಂಬ ವಾದವನ್ನು ಮುರಳೀಧರ್ ತಳ್ಳಿಹಾಕಿದರು. ಈ ವರ್ಷದ ಆರಂಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿದ್ದ ವರದಿಯನ್ನು ಉಲ್ಲೇಖಿಸಿದ ಅವರು, ಕದನ ವಿರಾಮದ ನಂತರವೂ ಫೆಲೆಸ್ತೀನಿಯನ್ನರು ಸಾವಿಗೀಡಾಗುತ್ತಿದ್ದಾರೆ ಮತ್ತು ಗಾಯಗೊಳ್ಳುತ್ತಿದ್ದಾರೆ ಎಂದು ಹೇಳಿದರು. ಅಗತ್ಯ ಪ್ರಮಾಣದಲ್ಲಿ ಮಾನವೀಯ ನೆರವು ತಲುಪುತ್ತಿಲ್ಲ ಎಂದೂ ಅವರು ಹೇಳಿದರು.
ಇಸ್ರೇಲಿ ಪಡೆಗಳಿಂದ ಬಂಧಿಸಲ್ಪಟ್ಟ ಫ್ಲೋಟಿಲ್ಲಾ ಕಾರ್ಯಕರ್ತರ ಮೇಲಿನ ವರ್ತನೆಯನ್ನು ಆಯೋಗ ಖಂಡಿಸಿದೆ. ಈ ಘಟನೆ, ಫೆಲೆಸ್ತೀನಿನ ಬಂಧಿತರ ಮೇಲಿನ ದೌರ್ಜನ್ಯ ಚಿತ್ರಹಿಂಸೆ ಮತ್ತು ಲೈಂಗಿಕ ಕಿರುಕುಳದ ಕುರಿತು ಈ ಹಿಂದೆ ಆಯೋಗ ಮಾಡಿದ್ದ ಆರೋಪಗಳಿಗೆ ಮತ್ತಷ್ಟು ಪುಷ್ಟಿ ನೀಡುತ್ತದೆ ಎಂದು ಹೇಳಿದೆ.
ಗಾಝಾದಲ್ಲಿನ ಘಟನೆಗಳಿಗೆ ಸಂಬಂಧಿಸಿದಂತೆ ಹಲವು ದೇಶಗಳಲ್ಲಿ ಆರಂಭವಾಗಿರುವ ನ್ಯಾಯಾಂಗ ತನಿಖೆಗಳನ್ನು ಆಯೋಗ ಸ್ವಾಗತಿಸಿದ್ದು, ಸದಸ್ಯ ರಾಷ್ಟ್ರಗಳು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ವರದಿಯ ಶಿಫಾರಸುಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.
ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಗಳಿಗೆ ಹೊಣೆಗಾರರ ವಿರುದ್ಧ ಕ್ರಮ ಜರುಗಿಸುವುದು ಮತ್ತು ತಪ್ಪಿತಸ್ಥರನ್ನು ನ್ಯಾಯಾಲಯದ ಮುಂದೆ ತರುವುದು ತನ್ನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ತನಿಖಾ ಕಾರ್ಯವನ್ನು ಮುಂದುವರಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಮುರಳೀಧರ್ ಅವರನ್ನು 2025ರ ನವೆಂಬರ್ನಲ್ಲಿ ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಜಾಂಬಿಯಾದ ಫ್ಲಾರೆನ್ಸ್ ಮುಂಬಾ ಮತ್ತು ಆಸ್ಟ್ರೇಲಿಯಾದ ಕ್ರಿಸ್ ಸಿಡೋಟಿ ಆಯೋಗದ ಇತರ ಸದಸ್ಯರಾಗಿದ್ದಾರೆ.