AI ಯುಗದಲ್ಲಿ ಉದ್ಯೋಗಿಗಳಿಗೆ ಸಂಕಷ್ಟ: 21,000 ಮಂದಿಯನ್ನು ವಜಾಗೊಳಿಸಿದ ಟೆಕ್ ದೈತ್ಯ Oracle!

ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ (AI) ಕಂಪೆನಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿದೆ. ಆದರೆ ಅನೇಕ ಉದ್ಯೋಗಿಗಳಿಗೆ ಇದು ಅನಿಶ್ಚಿತತೆಯನ್ನುಂಟು ಮಾಡಿದೆ. ಅಮೆರಿಕದ ತಂತ್ರಜ್ಞಾನ ದೈತ್ಯ ಸಂಸ್ಥೆ Oracle ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. AI ಕೇಂದ್ರಿತ ವ್ಯವಹಾರ ಮಾದರಿಯತ್ತ ತನ್ನ ಕಾರ್ಯತಂತ್ರವನ್ನು ಮರುರೂಪಿಸುತ್ತಿರುವ ಹಿನ್ನೆಲೆಯಲ್ಲಿ 2026ರ ಹಣಕಾಸು ವರ್ಷದಲ್ಲಿ ಕಂಪೆನಿಯು ಜಾಗತಿಕವಾಗಿ ಸುಮಾರು 21,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ಅದರ ವಾರ್ಷಿಕ ವರದಿ ತಿಳಿಸಿದೆ.

ಇದರಿಂದ Oracle ಕಂಪೆನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ 13% ದಷ್ಟು ಕುಸಿದಿದ್ದು, ಕಳೆದ ವರ್ಷ ಇದ್ದ ಸುಮಾರು 1.62 ಲಕ್ಷ ಉದ್ಯೋಗಿಗಳಿಂದ, 2026ರ ಮೇ 31ರ ವೇಳೆಗೆ 1.41 ಲಕ್ಷಕ್ಕೆ ಇಳಿದಿದೆ.
ಒರಾಕಲ್ ಸಂಸ್ಥೆಯ ಕಾರ್ಯವೈಖರಿಯನ್ನು ಬದಲಿಸುತ್ತಿರುವ AI
ಸೋಮವಾರ ಬಿಡುಗಡೆಯಾದ ತನ್ನ ವಾರ್ಷಿಕ ವರದಿಯಲ್ಲಿ ಒರಾಕಲ್ ತನ್ನ ಕಾರ್ಯಾಚರಣೆಗಳಲ್ಲಿ AI ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ ಈಗಾಗಲೇ ಉದ್ಯೋಗಿಗಳ ಕಡಿತಕ್ಕೆ ಕಾರಣವಾಗಿದೆ ಮತ್ತು ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗ ಕಡಿತಕ್ಕೆ ಕಾರಣವಾಗಬಹುದು ಎಂದು ಹೇಳಿದೆ.
ನಿರ್ವಹಣೆ, ಉತ್ಪನ್ನಗಳಲ್ಲಿನ ಬದಲಾವಣೆಗಳು, ಕಾರ್ಯಕ್ಷಮತೆಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಉದ್ಯೋಗಿಗಳ ಸಂಖ್ಯೆಯಲ್ಲಿನ ಈ ಕಡಿತಕ್ಕೆ ಹಲವು ಕಾರಣಗಳಿವೆ ಎಂದು Oracle ತಿಳಿಸಿದೆ.
ಈ ವರ್ಷದ ಆರಂಭದಲ್ಲೇ ಕಂಪೆನಿಯು ದೊಡ್ಡ ಬದಲಾವಣೆಗಳ ಸುಳಿವು ನೀಡಿತ್ತು. ಕೃತಕ ಬುದ್ಧಿಮತ್ತೆ (AI) ಡೇಟಾ ಸೆಂಟರ್‌ಗಳ ವಿಸ್ತರಣೆಗೆ ಭಾರೀ ಹೂಡಿಕೆ ಮಾಡುತ್ತಿರುವ ಕಾರಣ ಉಂಟಾದ ನಗದು ಹರಿವಿನ ಒತ್ತಡವನ್ನು ಎದುರಿಸಲು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವ ಯೋಜನೆ ಪ್ರಕಟಿಸಿತ್ತು.
Oracle ಇನ್ನು ಕೇವಲ ಡೇಟಾಬೇಸ್ ಸಾಫ್ಟ್‌ವೇರ್ ಕಂಪೆನಿಯಾಗಿ ಉಳಿದಿಲ್ಲ. ಲ್ಯಾರಿ ಎಲಿಸನ್ ಅವರ ನೇತೃತ್ವದಲ್ಲಿ ಕಂಪೆನಿಯು ಇತಿಹಾಸದಲ್ಲೇ ಅತಿದೊಡ್ಡ ರೂಪಾಂತರಗಳೊಂದನ್ನು ಎದುರು ನೋಡುತ್ತಿದ್ದು, ಕೃತಕ ಬುದ್ಧಿಮತ್ತೆ (AI) ಮತ್ತು ಕೌಡ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ವೇಗವಾಗಿ ಮುನ್ನುಗ್ಗುತ್ತಿದೆ.
ಈ ತಂತ್ರವು ಒರಾಕಲ್ ಅನ್ನು ಉದ್ಯಮದ ದೈತ್ಯರಾದ ಅಮೆಝಾನ್ ಮತ್ತು ಮೈಕ್ರೋಸಾಫ್ಟ್‌ನೊಂದಿಗೆ ನೇರ ಸ್ಪರ್ಧೆಗೆ ಇಳಿಸಿದೆ. ಇವೆರಡೂ ಈಗಾಗಲೇ ಕೌಡ್ ಕಂಪ್ಯೂಟಿಂಗ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ.