Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಖತರ್: ದ್ರವೀಕೃತ ನೈಸರ್ಗಿಕ ಅನಿಲ ಘಟಕದಲ್ಲಿ ಭೀಕರ ಸ್ಫೋಟ; 54 ಮಂದಿಗೆ ಗಾಯ, 18 ಮಂದಿ ನಾಪತ್ತೆ!

Spread the love

ದೋಹಾ: ಖತರ್ ನ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿರುವ ಪ್ರಮುಖ ದ್ರವೀಕೃತ ನೈಸರ್ಗಿಕ ಅನಿಲ(LNG) ಸಂಸ್ಕರಣಾ ಸಂಕೀರ್ಣದಲ್ಲಿ ರವಿವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ 54 ಮಂದಿ ಗಾಯಗೊಂಡಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ ಎಂದು ಖತರ್ ನ ಆಂತರಿಕ ಸಚಿವಾಲಯ ತಿಳಿಸಿದೆ.
‘ರಾಸ್ ಲಫಾನ್ ಕೈಗಾರಿಕಾ ನಗರದ ಕಾರ್ಖಾನೆಯಲ್ಲಿ ಸಂಭವಿಸಿದ ಘಟನೆಯಲ್ಲಿ ಒಟ್ಟು 54 ಮಂದಿ ಗಾಯಗೊಂಡಿದ್ದಾರೆ. ನಾಪತ್ತೆಯಾಗಿರುವ 18 ಮಂದಿಯನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ’ ಎಂದು ಸಚಿವಾಲಯವು ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಆಂತರಿಕ ಸಚಿವಾಲಯವು ಆರಂಭದಲ್ಲಿ ಈ ಘಟನೆಯನ್ನು ‘ಆಂತರಿಕ ಸ್ಫೋಟ’ ಎಂದು ಹೇಳಿದ್ದು, ಬಳಿಕ ತಾಂತ್ರಿಕ ದೋಷವೇ ಸ್ಫೋಟಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದೆ.
ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿರುವ ಬರ್ಜಾನ್ ಸ್ಥಳೀಯ ಅನಿಲ ಸರಬರಾಜು ಘಟಕದಲ್ಲಿ ಕಾರ್ಯಾಚರಣೆ ಆರಂಭವಾಗುತ್ತಿದ್ದ ವೇಳೆ ರವಿವಾರ ಸಂಜೆ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಖತರ್‌ ಎನರ್ಜಿ ಹೇಳಿಕೆಯಲ್ಲಿ ತಿಳಿಸಿದೆ.
ಘಟನಾ ಸ್ಥಳಕ್ಕೆ ತುರ್ತು ಸೇವಾ ಸಿಬ್ಬಂದಿಯನ್ನು ತಕ್ಷಣವೇ ನಿಯೋಜಿಸಲಾಗಿದ್ದು, ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಸ್ಫೋಟದಿಂದ ಉಂಟಾದ ಹಾನಿಯ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ.

ಆರಂಭದಲ್ಲಿ ಕೆಲವೇ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರಾದರೂ, ಹಲವು ಗಂಟೆಗಳ ಬಳಿಕ ಆಂತರಿಕ ಸಚಿವಾಲಯವು 54 ಮಂದಿ ಗಾಯಗೊಂಡಿರುವುದಾಗಿ ಹಾಗೂ 18 ಮಂದಿ ನಾಪತ್ತೆಯಾಗಿರುವುದಾಗಿ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.
ರಾಸ್ ಲಫಾನ್ ಕೈಗಾರಿಕಾ ಸಂಕೀರ್ಣದಲ್ಲಿನ ಈ ಸ್ಫೋಟವು ಈಗಾಗಲೇ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಖತರ್ ವಿಶ್ವದ ಪ್ರಮುಖ ನೈಸರ್ಗಿಕ ಅನಿಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ.
ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ವಿಧಿಸಿದ್ದ ನಿರ್ಬಂಧಗಳಿಂದ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದ ಹಿನ್ನೆಲೆಯಲ್ಲಿ ಖತರ್ ಈ ಹಿಂದೆ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.

ಅಮೆರಿಕ-ಇರಾನ್ ಯುದ್ಧದ ಸಂದರ್ಭದಲ್ಲಿ ಗಲ್ಫ್ ಪ್ರದೇಶದ ಇಂಧನ ಸೌಲಭ್ಯಗಳ ಮೇಲೆ ನಡೆದ ಇರಾನ್ ದಾಳಿಗಳ ಪರಿಣಾಮವಾಗಿ ಖತ‌ರ್ ನ ಅನಿಲ ಉತ್ಪಾದನಾ ವ್ಯವಸ್ಥೆ ಈಗಾಗಲೇ ಗಮನಾರ್ಹ ಹಾನಿಯನ್ನು ಅನುಭವಿಸಿತ್ತು.
ವಿಶ್ವದ ಅತಿದೊಡ್ಡ LNG ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾದ ಖತರ್, ಅಮೆರಿಕ, ಆಸ್ಟ್ರೇಲಿಯಾ ಹಾಗೂ ರಷ್ಯಾ ಜತೆಗೆ ಪ್ರಮುಖ ಉತ್ಪಾದಕರ ಪಟ್ಟಿಯಲ್ಲಿದೆ. ಮಾರ್ಚ್ 2ರಂದು ಪ್ರಮುಖ ಅನಿಲ ಸೌಲಭ್ಯಗಳ ಮೇಲೆ ನಡೆದ ಇರಾನ್ ಡೋನ್ ದಾಳಿಗಳ ಬಳಿಕ ದೇಶವು LNG ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.
ಆ ಸಂದರ್ಭದಲ್ಲಿ ಖತರ್ ನ ಇಂಧನ ಸಚಿವ ಸಾದ್ ಅಲ್-ಕಾಬಿ, ಮಾರ್ಚ್ 18ರಂದು ನಡೆದ ದಾಳಿಗಳಿಂದ ಉಂಟಾದ ಹೆಚ್ಚುವರಿ ಹಾನಿಯು ದೇಶದ LNG ರಫ್ತು ಸಾಮರ್ಥ್ಯವನ್ನು ಶೇ 17ರಷ್ಟು ಕಡಿಮೆ ಮಾಡಲಿದೆ ಹಾಗೂ ದುರಸ್ತಿ ಕಾರ್ಯಕ್ಕೆ ಮೂರರಿಂದ ಐದು ವರ್ಷಗಳವರೆಗೆ ಸಮಯ ಬೇಕಾಗಬಹುದು ಎಂದು ಹೇಳಿದ್ದರು.

ವಿಶ್ವದ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ ರಫ್ತು ಸೌಲಭ್ಯವಾದ ರಾಸ್ ಲಫಾನ್ ಅನ್ನು ಪುನಃ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರಲು ಖತರ್ ಈಗ ಕ್ರಮ ಕೈಗೊಂಡಿದೆ. ಜಾಗತಿಕ ಇಂಧನ ಮಾರುಕಟ್ಟೆಗಳು ಈ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಶೀಘ್ರ ಚೇತರಿಕೆ ಸಾಧ್ಯವಾದರೆ ಇಂಧನ ಬೆಲೆಗಳ ಮೇಲಿನ ಒತ್ತಡ ತಗ್ಗುವ ನಿರೀಕ್ಷೆಯಿದೆ.


Spread the love
Share:

administrator

Leave a Reply

Your email address will not be published. Required fields are marked *