ವಾಷಿಂಗ್ಟನ್/ಟೆಹ್ರಾನ್: ಯುದ್ಧದ ಕದನ ವಿರಾಮಕ್ಕೆ ಅಮೆರಿಕ-ಇರಾನ್ ಐತಿಹಾಸಿಕ ಡಿಜಿಟಲ್ ಸಹಿ; ನೌಕಾ ದಿಗ್ಬಂಧನ ತೆರವು!

ಟೆಹ್ರಾನ್/ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಎರಡೂ ದೇಶಗಳು ಡಿಜಿಟಲ್ ಮೂಲಕ ಔಪಚಾರಿಕವಾಗಿ ಸಹಿ ಹಾಕಿವೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಫೈ ದೃಢಪಡಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಇರಾನ್ ನ ಸರ್ಕಾರಿ ಮಾಧ್ಯಮ ‘ಪ್ರೆಸ್ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಫೈ, ಒಪ್ಪಂದಕ್ಕೆ ಈಗ ಎರಡೂ ಕಡೆಯವರು ಅಧಿಕೃತವಾಗಿ ಸಹಿ ಹಾಕಿದ್ದು, ಅದರಡಿ ಉಭಯ ದೇಶಗಳು ಕೈಗೊಂಡಿರುವ ಬದ್ಧತೆಗಳು ಜಾರಿಗೆ ಬಂದಿವೆ ಎಂದು ತಿಳಿಸಿದ್ದಾರೆ.

ಇರಾನ್ ನ ಬಂದರುಗಳ ಮೇಲಿನ ಅಮೆರಿಕದ ನೌಕಾ ದಿಗಂಧನವನ್ನು ತೆಗೆದುಹಾಕುವ ಉದ್ದೇಶದಿಂದ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸಂಧಾನ ತಂಡಗಳು ಸ್ವಿಟ್ಟರ್‌ಲ್ಯಾಂಡ್ ನ ಜಿನೀವಾದಲ್ಲಿ ಸಭೆ ನಡೆಸುವ ಯೋಜನೆ ಮುಂದುವರಿದಿದ್ದರೂ, ದಾಖಲೆಗಳಿಗೆ ಡಿಜಿಟಲ್ ಸಹಿ ಹಾಕಿರುವುದರಿಂದ ಯಾವುದೇ ಭೌತಿಕ ಸಹಿ ಸಮಾರಂಭ ನಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಒಪ್ಪಂದದ ಪ್ರಕಾರ, ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನೀಡುವ ಸಾರಿಗೆ ರಿಯಾಯಿತಿಗಳಿಗೆ ಪ್ರತಿಯಾಗಿ, ಇರಾನಿನ ಬಂದರುಗಳ ಮೇಲಿನ ಅಮೆರಿಕದ ನೌಕಾ ದಿಗಂಧನವನ್ನು ಆರಂಭಿಕವಾಗಿ 30 ದಿನಗಳೊಳಗೆ ತೆರವುಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಇಸ್ರೇಲ್ ಸರ್ಕಾರವು ದಹಿಯೆಹ್ ಪ್ರದೇಶದ ಮೇಲೆ ನಡೆಸಿದ ದಾಳಿ ಮತ್ತು ಅದರ ಬಳಿಕ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಡೆದ ತುರ್ತು ಮಾತುಕತೆಗಳು ಅಮೆರಿಕದ ಅನುಷ್ಠಾನ ಕ್ರಮವನ್ನು ವೇಗಗೊಳಿಸಿವೆ ಎಂದು ಬಫೈ ಹೇಳಿದ್ದಾರೆ.
ಇದರ ಪರಿಣಾಮವಾಗಿ, ಇರಾನಿನ ಹಡಗುಗಳು ಈಗಾಗಲೇ ಯಾವುದೇ ಅಡೆತಡೆಯಿಲ್ಲದೆ ಬಂದರುಗಳಿಗೆ ಪ್ರವೇಶಿಸಿ ನಿರ್ಗಮಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಅದರಲ್ಲಿ ಉಲ್ಲೇಖಿಸಲಾದ ಇರಾನ್ ನ ನಿರ್ದಿಷ್ಟ ಪರಸ್ಪರ ಬದ್ಧತೆಗಳು ಅಧಿಕೃತವಾಗಿ ಜಾರಿಗೆ ಬಂದಿವೆ ಎಂದು ಬಫೈ ಹೇಳಿದ್ದಾರೆ.
ಲೆಬನಾನ್ ನಲ್ಲಿ ಯುದ್ಧವನ್ನು ಅಂತ್ಯಗೊಳಿಸುವುದು ಮತ್ತು ಕದನ ವಿರಾಮವನ್ನು ಖಚಿತಪಡಿಸಿಕೊಳ್ಳುವುದು ಟೆಹ್ರಾನ್‌ಗೆ ತನ್ನ ದೇಶೀಯ ಹಿತಾಸಕ್ತಿಗಳಷ್ಟೇ ಮಹತ್ವದ್ದಾಗಿದೆ ಎಂದೂ ಅವರು ಹೇಳಿದ್ದಾರೆ. ಒಪ್ಪಂದದ ಮೊದಲ ಷರತ್ತಿನಲ್ಲೇ ‘ಲೆಬನಾನ್’ ಎಂಬ ಉಲ್ಲೇಖ ಮೂರು ಬಾರಿ ಕಾಣಿಸಿಕೊಳ್ಳುತ್ತದೆ. ಇದು ಲೆಬನಾನ್ ನ ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಗೌರವ ನೀಡುವುದನ್ನು ಕಡ್ಡಾಯಗೊಳಿಸುತ್ತದೆ ಎಂದು ಅವರು ವಿವರಿಸಿದ್ದಾರೆ.
ಈ ಆರಂಭಿಕ ಹಂತದಲ್ಲಿ ಯುದ್ಧವನ್ನು ಕೊನೆಗೊಳಿಸುವುದರತ್ತ ಮಾತ್ರ ಗಮನ ಹರಿಸಲಾಗಿದ್ದು, ಪರಮಾಣು ವಿಷಯವನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿದೆ. ಸಹಿ ಮಾಡಲಾದ ಒಪ್ಪಂದದ ಪ್ರಕಾರ, ಇರಾನ್ ನ ಪರಮಾಣು ಕಾರ್ಯಕ್ರಮ ಮತ್ತು ನಿರ್ಬಂಧಗಳ ತೆರವು ಕುರಿತ ಮಾತುಕತೆಗಳನ್ನು ತಕ್ಷಣದಿಂದಲೇ ಆರಂಭಿಸಲು 60 ದಿನಗಳ ಕಟ್ಟುನಿಟ್ಟಿನ ಅವಧಿಯನ್ನು ನಿಗದಿಪಡಿಸಲಾಗಿದೆ. ಅಗತ್ಯವಿದ್ದಲ್ಲಿ ಈ ಅವಧಿಯನ್ನು ವಿಸ್ತರಿಸಬಹುದಾಗಿದೆ.
ಇರಾನ್ ನ ರಕ್ಷಣಾತ್ಮಕ ಸಾಮರ್ಥ್ಯಗಳು ಮತ್ತು ಕ್ಷಿಪಣಿ ಕಾರ್ಯಕ್ರಮಗಳು ಯಾವುದೇ ಮಾತುಕತೆಯ ಭಾಗವಾಗುವುದಿಲ್ಲ ಎಂದು ಬಫೈ ಸ್ಪಷ್ಟಪಡಿಸಿದ್ದಾರೆ.
‘ದೇಶದ ಕ್ಷಿಪಣಿಗಳು ಹಾರಿಸಲು ಮಾತ್ರ; ಮಾತುಕತೆಗೆ ಅಲ್ಲ. ಟೆಹ್ರಾನ್ ಯಾವುದೇ ಪ್ರಕ್ರಿಯೆಯಲ್ಲಿಯೂ ಅಥವಾ ಯಾವುದೇ ಪಕ್ಷದೊಂದಿಗೂ ತನ್ನ ರಕ್ಷಣಾ ಸಾಮರ್ಥ್ಯಗಳ ಕುರಿತು ಚರ್ಚಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಶ್ವೇತಭವನವೂ ದೃಢಪಡಿಸಿದೆ.
ಇರಾನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಟ್ರಂಪ್ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಈ ಜ್ಞಾಪಕ ಪತ್ರಕ್ಕೆ ರವಿವಾರ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ಇರಾನ್ ನ ಮುಖ್ಯ ಸಂಧಾನಕಾರ ಮೊಹಮ್ಮದ್ ಬಘರ್ ಗಾಲಿಬಾಫ್ ಡಿಜಿಟಲ್ ಸಹಿ ಹಾಕಿದ್ದು, ಅಧ್ಯಕ್ಷ ಟ್ರಂಪ್ ಸಾಕ್ಷಿಯಾಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.