ಅಯೋಧ್ಯೆ: ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ ತೀವ್ರ; ನೌಕರನ ಮನೆಯಲ್ಲಿ ಲಕ್ಷ ಲಕ್ಷ ನಗದು ಪತ್ತೆ!

ಲಖನೌ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ನಿಧಿಯಿಂದ ಕೋಟಿ ಕೋಟಿ ರೂಪಾಯಿ ದುರುಪಯೋಗವಾಗಿದೆ ಎಂಬ ಆರೋಪದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಈ ಸಂಬಂಧ ದೇವಸ್ಥಾನದ ನೌಕರನೊಬ್ಬನ ನಿವಾಸದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ 10 ಲಕ್ಷದಿಂದ 12 ಲಕ್ಷ ರೂ.ವರೆಗೆ ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಅಯೋಧ್ಯೆಯ ರುಡೌಲಿ ಪ್ರದೇಶದ ಮೀನಾಪುರ್ ಠಾಕೂರನ್ ಫಗೌಲಿ ಗ್ರಾಮದ ನಿವಾಸಿ ಲವಕುಶ್ ಮಿಶ್ರಾ ನ ಮನೆಯಲ್ಲಿ ಅಯೋಧ್ಯಾ ಪೊಲೀಸರು ಶೋಧ ನಡೆಸಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಸಮ್ಮುಖದಲ್ಲೇ ಈ ಕಾರ್ಯಾಚರಣೆ ನಡೆದಿರುವುದಾಗಿ ಮೂಲಗಳು ಹೇಳಿವೆ.

ದೇವಾಲಯ ಆಡಳಿತದಲ್ಲಿ ಉದ್ಯೋಗ ಪಡೆಯುವ ಮೊದಲು ಲವಕುಶ್ ಮಿಶ್ರಾ ಕಾರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಬಳಿಕ ಅಲ್ಪಾವಧಿಯಲ್ಲೇ ಆತನ ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ ಎಂದು ಸ್ಥಳೀಯ ಮೂಲಗಳು ಆರೋಪಿಸಿವೆ.
ಈ ನಡುವೆ, ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಐದು ದಿನಗಳಲ್ಲಿ ಎರಡನೇ ಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಆದರೆ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ತಾವು ನಿರ್ಮಾಣ ಕಾಮಗಾರಿಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಮಾತ್ರ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ದೇಣಿಗೆ ನಿಧಿ ದುರುಪಯೋಗ ಆರೋಪಗಳ ಕುರಿತು ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೋರಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ದೇವಾಲಯದ ಕಾಣಿಕೆಗಳನ್ನು ಎಣಿಸುವ ಜವಾಬ್ದಾರಿ ಹೊಂದಿದ್ದ ಇಬ್ಬರು ಸಿಬ್ಬಂದಿಯನ್ನು ಟ್ರಸ್ಟ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎನ್ನಲಾಗಿದೆ. ತಿಂಗಳಿಗೆ 18 ಸಾವಿರದಿಂದ 20 ಸಾವಿರ ರೂ. ವೇತನ ಪಡೆಯುತ್ತಿದ್ದ ಈ ಸಿಬ್ಬಂದಿಗಳಲ್ಲಿ ಒಬ್ಬ ಇತ್ತೀಚೆಗೆ 1.5 ಕೋಟಿ ರೂ. ಮೌಲ್ಯದ ಭೂಮಿಯನ್ನು ಖರೀದಿಸಿದ್ದರೆ, ಮತ್ತೊಬ್ಬ 40 ಲಕ್ಷ ರೂ. ಮೌಲ್ಯದ ಭೂಮಿಯನ್ನು ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಯೋಧ್ಯೆಯ ಸಂತರು ಹಾಗೂ ಮಠಾಧೀಶರು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ಸಮಾಜವಾದಿ ಪಕ್ಷ ಸರ್ಕಾರದಲ್ಲಿ ಸಚಿವರಾಗಿದ್ದ ಪವನ್ ಪಾಂಡೆ ಅವರು ಜೂನ್ 7ರಂದು ರಾಮ ಮಂದಿರದ ದೇಣಿಗೆ ನಿಧಿಯಿಂದ 5 ಕೋಟಿ ರೂ.ದಿಂದ 7.5 ಕೋಟಿ ರೂ.ವರೆಗೆ ದುರುಪಯೋಗ ನಡೆದಿದೆ ಎಂದು ಆರೋಪಿಸಿದ್ದರು. ಬಳಿಕ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಪ್ರಕರಣದ ಕುರಿತು ರಾಜ್ಯ ಸರ್ಕಾರ ಮೌನ ವಹಿಸಿರುವುದನ್ನು ಪ್ರಶ್ನಿಸಿ, ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಪ್ರಕರಣದ ಬಗ್ಗೆ ಗಮನಹರಿಸಿ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದರು.
ಆದರೆ ದೇವಾಲಯದ ನಿಧಿಯ ಲೆಕ್ಕಪರಿಶೋಧನೆ ಪ್ರಕ್ರಿಯೆ ನಡೆಯುತ್ತಿದ್ದು, ಇದುವರೆಗೆ ಯಾವುದೇ ಅಕ್ರಮ ಬೆಳಕಿಗೆ ಬಂದಿಲ್ಲ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಅವರು ವೀಡಿಯೊ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ.
ಜೂನ್ 9ರಂದು ಬಿಜೆಪಿ ನಾಯಕ ಡಾ. ರಜನೀಶ್ ಸಿಂಗ್ ಅವರು ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದರು. ಮರುದಿನ ಪ್ರಧಾನ ಮಂತ್ರಿ ಕಚೇರಿ (PMO) ದೇವಾಲಯ ಟ್ರಸ್ಟಿಂದ ಈ ಕುರಿತು ಸಮಗ್ರ ವರದಿ ಕೋರಿದೆ.
ಇದರ ಬೆನ್ನಲ್ಲೇ, ಕಾಣಿಕೆಗಳ ದುರುಪಯೋಗ ಕುರಿತು ಸಿಬಿಐ ತನಿಖೆಗೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠದಲ್ಲಿ ಶುಕ್ರವಾರ ಸಲ್ಲಿಕೆಯಾಗಿದೆ. ಸ್ಥಳೀಯ ವಕೀಲ ಮೋಹಿತ್ ಅಶೋಕ್ ಸಲ್ಲಿಸಿರುವ ಅರ್ಜಿಯು ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಅರ್ಜಿಯಲ್ಲಿ ಭಾರತದ ನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕ (CAG) ಮೂಲಕ ದೇವಾಲಯದ ಕಾಣಿಕೆಗಳ ಲೆಕ್ಕಪರಿಶೋಧನೆ ನಡೆಸುವಂತೆ ಕೋರಲಾಗಿದೆ.
ಈ ನಡುವೆ, ದೇವಾಲಯದ ಹಿಂದಿನ ಲೆಕ್ಕಪತ್ರ ಉಸ್ತುವಾರಿ ಎಂದು ಹೇಳಿಕೊಳ್ಳುವ ಮಾಜಿ ಲೆಕ್ಕಪರಿಶೋಧಕ ಮಹಿಪಾಲ್ ಸಿಂಗ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಾಣಿಕೆಗಳ ಕಳ್ಳತನ ಸಾಮಾನ್ಯ ಸಂಗತಿಯಾಗಿತ್ತು ಎಂದು ಆರೋಪಿಸಿರುವ ಅವರು, ಈ ಕುರಿತು ಚಂಪತ್ ರಾಯ್ ಹಾಗೂ ಟ್ರಸ್ಟ್ ಸದಸ್ಯ ಗೋಪಾಲ್ ಅವರಿಗೆ ಮಾಹಿತಿ ನೀಡಿದ ಮರುದಿನವೇ ತಮ್ಮನ್ನು ಹುದ್ದೆಯಿಂದ ತೆಗೆದುಹಾಕಲಾಯಿತು ಎಂದು ಹೇಳಿದ್ದಾರೆ.
ಎಂಟು ತಿಂಗಳ ಹಿಂದಿನ ದೇವಾಲಯದ CCTV ದೃಶ್ಯಾವಳಿಗಳನ್ನು ಅಳಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ. ತಮ್ಮ ಲೆಕ್ಕಪರಿಶೋಧನಾ ಅನುಭವದ ಹಿನ್ನೆಲೆಯಲ್ಲಿ ಕೋಟಾದಿಂದ RSS ಮೂಲಕ ಅಯೋಧ್ಯೆಗೆ ಕರೆತರಲಾಗಿತ್ತು ಹಾಗೂ ರಾಮ ಮಂದಿರದ ಸಮರ್ಪಣ ನಿಧಿ ಅಭಿಯಾನದ ವೇಳೆ ಸುಮಾರು 50 ಠೇವಣಿದಾರರ ಕಾರ್ಯವನ್ನು ಮೇಲ್ವಿಚಾರಣೆ ಮಾಡಿದ್ದೆ ಎಂದು ಮಹಿಪಾಲ್ ಸಿಂಗ್ ತಿಳಿಸಿದ್ದಾರೆ.