ಕಾಸರಗೋಡು: ಕುಂಬಳೆ ಬಳಿ ಬಿರುಗಾಳಿಯ ಮುನ್ಸೂಚನೆ; ತೆಂಗಿನ ಮರ ಬಿದ್ದು ಮಸೀದಿ ಅಧ್ಯಕ್ಷ ದಾರುಣ ಸಾ*ವು!

ಕಾಸರಗೋಡು: ಗಾಳಿಯ ಅಬ್ಬರಕ್ಕೆ ತೆಂಗಿನ ಮರ ಮುರಿದು ಬಿದ್ದು ಓರ್ವ ಮೃತಪಟ್ಟಿದ್ದು, ಇನ್ನಿಬ್ಬರು ಅಪಾಯದಿಂದ ಪಾರಾದ ಘಟನೆ ಬುಧವಾರ ಬೆಳಿಗ್ಗೆ ಕುಂಬಳೆ ಸಮೀಪದ ಪೆರುವಾಡ್ ಮೈದಾನದಲ್ಲಿ ನಡೆದಿದೆ.
ಪೆರುವಾಡ್ ನಿವಾಸಿ ಅಬ್ದುಲ್ಲ (65) ಮೃತಪಟ್ಟವರು. ಪೆರುವಾಡು ಜುಮಾ ಮಸೀದಿ ಸಮಿತಿಯ ಅಧ್ಯಕ್ಷರಾಗಿದ್ದ ಅಬ್ದುಲ್ಲ ಅವರು, ವೃತ್ತಿಯಲ್ಲಿ ಮೀನುಗಾರರಾಗಿದ್ದರು.
ಬೆಳಿಗ್ಗೆ ಸುಮಾರು 8:30ರ ವೇಳೆಗೆ ಅಬ್ದುಲ್ಲ ಅವರು ತಮ್ಮಸ್ನೇಹಿತರಾದ ಇಬ್ರಾಹಿಂ ಮತ್ತು ಹಸೈನಾರ್ ಅವರೊಂದಿಗೆ ಮೈದಾನದಲ್ಲಿ ಕುಳಿತು ಮಾತನಾಡುತ್ತಿದ್ದ ವೇಳೆ ಜೋರಾಗಿ ಗಾಳಿ ಬೀಸಿದ ಪರಿಣಾಮ ತೆಂಗಿನ ಮರ ಮುರಿದು ಅವರ ಮೇಲೆ ಬಿದ್ದಿದೆ ಎನ್ನಲಾಗಿದೆ.
ಜೊತೆಯಲ್ಲಿದ್ದ ಇಬ್ರಾಹಿಂ ಮತ್ತು ಹಸೈನಾರ್ ಅವರು ಶಬ್ದ ಕೇಳಿ ಸ್ಥಳದಿಂದ ಓಡಿ ದೂರ ಸರಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಬ್ದುಲ್ಲ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಕುರಿತು ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
