ಉಡುಪಿ: ಬಾವಿಗೆ ಬಿದ್ದ ಪತ್ನಿಯ ರಕ್ಷಣೆಗೆ ಧುಮುಕಿದ 65ರ ವೃದ್ಧ ಪತಿ; ದಂಪತಿ ಪ್ರಾಣಾಪಾಯದಿಂದ ಪಾರು!

ಉಡುಪಿ : ದಾಂಪತ್ಯ ಬಾಂಧವ್ಯ ಮತ್ತು ಪ್ರೀತಿಯ ಅಪರೂಪದ ಹಾಗೂ ರೋಮಾಂಚನಕಾರಿ ನಿದರ್ಶನವೊಂದಕ್ಕೆ ಉಡುಪಿ ಸಮೀಪದ ಕೆಮ್ಮಣ್ಣು ಬುಧವಾರ ಸಾಕ್ಷಿಯಾಗಿದೆ. ಆಕಸ್ಮಿಕವಾಗಿ 30 ಅಡಿ ಆಳದ ಬಾವಿಗೆ ಬಿದ್ದ ಪತ್ನಿಯನ್ನು ರಕ್ಷಿಸಲು 65 ವರ್ಷದ ಪತಿಯೊಬ್ಬರು ತಮ್ಮ ಸ್ವಂತ ಜೀವವನ್ನೇ ಲೆಕ್ಕಿಸದೆ ಬಾವಿಗೆ ಜಿಗಿದು, ಆಕೆಗೆ ಧೈರ್ಯ ತುಂಬುತ್ತಾ ರಕ್ಷಿಸಿರುವ ಹೃದಯಸ್ಪರ್ಶಿ ಘಟನೆ ನಡೆದಿದೆ.

ಕೆಮ್ಮಣ್ಣು ಸರ್ಕಾರಿ ಶಾಲೆಯ ಸಮೀಪದ ನಿವಾಸಿಗಳಾದ ಗೋಪಾಲಕೃಷ್ಣ ಹೆಗ್ಡೆ (65) ಹಾಗೂ ಶ್ಯಾಮಲಾ (60) ಎಂಬುವವರೇ ಈ ಘಟನೆಯಲ್ಲಿ ಅಪಾಯದಿಂದ ಪಾರಾದ ದಂಪತಿ. ಬುಧವಾರ ಬೆಳಿಗ್ಗೆ ಶ್ಯಾಮಲಾ ಅವರು ತಮ್ಮ ಮನೆಯ ಸಮೀಪವಿರುವ ಬಾವಿಯಿಂದ ನೀರು ಸೇದಲು ಹೋಗಿದ್ದರು. ಈ ಬಾವಿಯ ಒಂದು ಬದಿಗೆ ಸುರಕ್ಷತಾ ಆವರಣ ಗೋಡೆ ಇರಲಿಲ್ಲ ಎನ್ನಲಾಗಿದೆ. ದುರದೃಷ್ಟವಶಾತ್ ನೀರು ಸೇದುವ ಭರದಲ್ಲಿ ಶ್ಯಾಮಲಾ ಅವರ ಕಾಲು ಜಾರಿ, ಆಕಸ್ಮಿಕವಾಗಿ 30 ಅಡಿ ಆಳದ ಬಾವಿಯೊಳಗೆ ಬಿದ್ದಿದ್ದಾರೆ.
ಪತ್ನಿ ಬಾವಿಗೆ ಬಿದ್ದು ಅಪಾಯದಲ್ಲಿರುವುದನ್ನು ಗಮನಿಸಿದ ಗೋಪಾಲಕೃಷ್ಣ ಹೆಗ್ಡೆ ಅವರು, ಕ್ಷಣಾರ್ಧವೂ ಯೋಚಿಸದೆ ಆಕೆಯನ್ನು ಬದುಕಿಸಲೇಬೇಕೆಂಬ ಹಠದಿಂದ ತಾವೂ ಬಾವಿಗೆ ಧುಮುಕಿದ್ದಾರೆ. ಬಾವಿ ಆಳವಾಗಿದ್ದರಿಂದ ಇಬ್ಬರಿಗೂ ಸ್ವಂತ ಬಲದಿಂದ ಮೇಲೆ ಬರಲು ಸಾಧ್ಯವಾಗದೆ ಒಳಗೇ ಬಂಧಿಯಾಗಿದ್ದಾರೆ. ಆದರೆ, ಗೋಪಾಲಕೃಷ್ಣ ಅವರು ಬಾವಿಯ ತಳದಲ್ಲೂ ಪತ್ನಿಗೆ ಧೈರ್ಯ ತುಂಬುತ್ತಾ, ಆಕೆಗೆ ಆಸರೆಯಾಗಿ ನಿಂತಿದ್ದರು. ಪ್ರಸ್ತುತ ಇನ್ನೂ ಮಳೆಗಾಲ ಸರಿಯಾಗಿ ಆರಂಭವಾಗದ ಕಾರಣ ಬಾವಿಯಲ್ಲಿ ನೀರು ಕಡಿಮೆ ಇದ್ದದ್ದು ದಂಪತಿಯ ಪಾಲಿಗೆ ವರದಾನವಾಯಿತು.
ಬಾವಿಯೊಳಗೆ ದಂಪತಿ ಸಿಲುಕಿರುವುದನ್ನು ಕಂಡ ಮನೆಯಲ್ಲಿದ್ದ ಮತ್ತೊಬ್ಬ ಮಹಿಳೆ, ತಕ್ಷಣವೇ ಸಮೀಪದ ಕಾಲೇಜಿಗೆ ಓಡಿಹೋಗಿ ಅಲ್ಲಿನ ಶಿಕ್ಷಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಉಡುಪಿಯ ಪ್ರಸಿದ್ಧ ಸಮಾಜಸೇವಕ, ಆಪದ್ಬಾಂಧವ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಜಂಟಿ ರಕ್ಷಣಾ ತಂಡವು ಕಾರ್ಯಾಚರಣೆ ನಡೆಸಿತು. ಶ್ಯಾಮಲಾ ಅವರನ್ನು ಹಲಗೆಯ ಸಹಾಯದಿಂದ ಹಾಗೂ ಗೋಪಾಲಕೃಷ್ಣ ಹೆಗ್ಡೆ ಅವರನ್ನು ಕುರ್ಚಿಯ ನೆರವಿನಿಂದ ಅತ್ಯಂತ ಜಾಗರೂಕತೆಯಿಂದ ಮೇಲಕ್ಕೆ ಎತ್ತಲಾಯಿತು.
ಬಾವಿಯಿಂದ ಮೇಲಕ್ಕೆ ತರುವಷ್ಟರಲ್ಲಿ ದಂಪತಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಸದ್ಯ ದಂಪತಿ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಮಯೋಚಿತವಾಗಿ ನಡೆದ ಈ ರಕ್ಷಣಾ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ