ವಾಶಿಂಗ್ಟನ್: ಟ್ರಂಪ್ ನೇರ ಮಧ್ಯಸ್ಥಿಕೆ; ಇಸ್ರೇಲ್-ಹಿಜ್ಬುಲ್ಲಾ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಗೆ!

ವಾಷಿಂಗ್ಟನ್ : ಲೆಬನಾನ್ನಲ್ಲಿ ಉಲ್ಬಣಗೊಂಡಿದ್ದ ಯುದ್ಧದ ಆತಂಕದ ನಡುವೆಯೇ ಮಧ್ಯಪ್ರಾಚ್ಯದಲ್ಲಿ ಅತ್ಯಂತ ಮಹತ್ವದ ರಾಜತಾಂತ್ರಿಕ ಬೆಳವಣಿಗೆಯೊಂದು ನಡೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ಮಧ್ಯಸ್ಥಿಕೆಯ ಬಳಿಕ ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಂಘರ್ಷವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಒಪ್ಪಿಗೆ ಸೂಚಿಸಿವೆ. ಲೆಬನಾನ್ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸಲು ಸಜ್ಜಾಗಿದ್ದ ಇಸ್ರೇಲ್ ಸೇನೆ ತನ್ನ ಯೋಜನೆಗೆ ಸದ್ಯಕ್ಕೆ ಬ್ರೇಕ್ ಹಾಕಿದ್ದು, ಉಭಯ ಬಣಗಳು ದಾಳಿ ನಿಲ್ಲಿಸಲು ಒಪ್ಪಿರುವುದಾಗಿ ಟ್ರಂಪ್ ಪ್ರಕಟಿಸಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಸುದೀರ್ಘ ದೂರವಾಣಿ ಮಾತುಕತೆ ನಡೆಸಿದ ಬಳಿಕ ಹಾಗೂ ಮಧ್ಯವರ್ತಿಗಳ ಮೂಲಕ ಹಿಜ್ಬುಲ್ಲಾ ಸಂಘಟನೆಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ ನಂತರ ಈ ಒಪ್ಪಂದ ಏರ್ಪಟ್ಟಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಇಸ್ರೇಲ್ ಬೈರೂತ್ ಕಡೆಗೆ ಯಾವುದೇ ಸೈನಿಕರನ್ನು ಕಳುಹಿಸುವುದಿಲ್ಲ. ಈಗಾಗಲೇ ಮುನ್ನಡೆಯುತ್ತಿದ್ದ ಸೈನಿಕರನ್ನು ಹಿಂದಕ್ಕೆ ಕರೆಸಲಾಗಿದೆ. ಹಿಜ್ಬುಲ್ಲಾ ಕೂಡ ಎಲ್ಲಾ ರೀತಿಯ ಗುಂಡಿನ ದಾಳಿಗಳನ್ನು ನಿಲ್ಲಿಸಲು ಒಪ್ಪಿದೆ. ಇಸ್ರೇಲ್ ದಾಳಿ ನಡೆಸುವುದಿಲ್ಲ ಮತ್ತು ಹಿಜ್ಬುಲ್ಲಾ ಕೂಡ ಪ್ರತಿದಾಳಿ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಮಂಡಿಸಿದ್ದ ವಿಶೇಷ ಶಾಂತಿ ಪ್ರಸ್ತಾವನೆಯನ್ನು ಲೆಬನಾನ್ ಸರ್ಕಾರ ಹಾಗೂ ಹಿಜ್ಬುಲ್ಲಾ ಒಪ್ಪಿಕೊಂಡಿವೆ ಎಂದು ಅಮೆರಿಕದಲ್ಲಿರುವ ಲೆಬನಾನ್ ರಾಯಭಾರ ಕಚೇರಿ ದೃಢಪಡಿಸಿದೆ. ಈ ಪ್ರಸ್ತಾವನೆಯ ಪ್ರಕಾರ, ಇಸ್ರೇಲ್ ಸೇನೆಯು ಬೈರೂತ್ನ ದಕ್ಷಿಣ ಉಪನಗರಗಳ ಮೇಲೆ ದಾಳಿ ನಡೆಸಬಾರದು ಮತ್ತು ಉತ್ತರ ಇಸ್ರೇಲ್ ಪ್ರದೇಶಗಳ ಮೇಲೆ ಹಿಜ್ಬುಲ್ಲಾ ದಾಳಿ ಮಾಡಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಅಧ್ಯಕ್ಷ ಟ್ರಂಪ್ ಈ ಕುರಿತು ಲೆಬನಾನ್ ರಾಯಭಾರಿ ನಡಾ ಹಮಾದೆ ಮೊವಾಡ್ ಅವರೊಂದಿಗೆ ಮಾತುಕತೆ ನಡೆಸಿದ್ದು, ನೆತನ್ಯಾಹು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ರಾಯಭಾರ ಕಚೇರಿ ಹೇಳಿದೆ. ಆದರೆ, ಹಿಜ್ಬುಲ್ಲಾ ಸಂಘಟನೆಯಿಂದ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಅಂತಿಮ ಕದನ ವಿರಾಮ ಜಾರಿಗೆ ತರುವ ನಿಟ್ಟಿನಲ್ಲಿ ವಾಷಿಂಗ್ಟನ್ನಲ್ಲಿ ಇಸ್ರೇಲ್ ಮತ್ತು ಲೆಬನಾನ್ ಪ್ರತಿನಿಧಿಗಳ ನಡುವೆ ಮಂಗಳವಾರ ಮತ್ತು ಬುಧವಾರ ಉನ್ನತ ಮಟ್ಟದ ಮಾತುಕತೆ ನಡೆಯಲಿದೆ.
ಡೊನಾಲ್ಡ್ ಟ್ರಂಪ್ ಈ ಶಾಂತಿ ಒಪ್ಪಂದದ ಘೋಷಣೆ ಮಾಡಿದ ಕೆಲವೇ ಕ್ಷಣಗಳಲ್ಲಿ ಉತ್ತರ ಇಸ್ರೇಲ್ ಭಾಗದಲ್ಲಿ ಲೆಬನಾನ್ನಿಂದ ಕ್ಷಿಪಣಿಗಳು ಉಡಾವಣೆಯಾಗಿವೆ. ಇದರಿಂದಾಗಿ ಪರಿಸ್ಥಿತಿ ಇನ್ನೂ ಸಂಪೂರ್ಣ ಹತೋಟಿಗೆ ಬಂದಿಲ್ಲ ಎಂಬುದು ಸ್ಪಷ್ಟವಾಗಿದ್ದು, ಇಸ್ರೇಲ್ ಸೇನೆಯು ಉತ್ತರ ಭಾಗದ ನಿವಾಸಿಗಳಿಗೆ ತಕ್ಷಣವೇ ಸುರಕ್ಷಿತ ಆಶ್ರಯ ತಾಣಗಳಿಗೆ ತೆರಳುವಂತೆ ಹೈ-ಅಲರ್ಟ್ ಘೋಷಿಸಿದೆ.
ಟ್ರಂಪ್ ಅವರ ಅಧಿಕೃತ ಘೋಷಣೆಗೂ ಮುನ್ನ ಇಸ್ರೇಲ್ ಸರ್ಕಾರ ಬೈರೂತ್ನ ದಕ್ಷಿಣ ಉಪನಗರಗಳ ಮೇಲೆ ಭೀಕರ ವಾಯುದಾಳಿಗೆ ಆದೇಶ ನೀಡಿತ್ತು. ಹಿಜ್ಬುಲ್ಲಾ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಆರೋಪಿಸಿದ್ದರು. ಇಸ್ರೇಲ್ ಸೇನೆಯ ಎಚ್ಚರಿಕೆಯ ಬೆನ್ನಲ್ಲೇ ದಹಿಯೆ ಸೇರಿದಂತೆ ಬೈರೂತ್ನ ದಕ್ಷಿಣ ಭಾಗದ ಸಾವಿರಾರು ನಿವಾಸಿಗಳು ಕುಟುಂಬ ಸಮೇತ ಕಳವಳದಿಂದ ಪಲಾಯನ ಮಾಡಿದ್ದರಿಂದ ರಸ್ತೆಗಳಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿತ್ತು. ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ದಕ್ಷಿಣ ಲೆಬನಾನ್ನಲ್ಲಿ ಆರು ಮಂದಿ ಮೃತಪಟ್ಟಿದ್ದು, ಟೈರ್ ನಗರದ ಜಬಲ್ ಅಮೆಲ್ ಆಸ್ಪತ್ರೆಯ ಕಟ್ಟಡಕ್ಕೂ ಭಾರೀ ಹಾನಿಯಾಗಿದೆ.
ಈ ಸಂಘರ್ಷದ ಬಿಸಿ ಈಗ ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಮಾತುಕತೆಗಳ ಮೇಲೂ ಬೀರುತ್ತಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಪ್ರತಿಕ್ರಿಯಿಸಿ, “ಅಮೆರಿಕ-ಇರಾನ್ ನಡುವೆ ಯಾವುದೇ ಕದನ ವಿರಾಮ ಒಪ್ಪಂದವಾದರೂ ಅದು ಲೆಬನಾನ್ ಸೇರಿದಂತೆ ಇಡೀ ಮಧ್ಯಪ್ರಾಚ್ಯದ ಎಲ್ಲಾ ಪ್ರದೇಶಗಳಿಗೂ ಅನ್ವಯಿಸಬೇಕು. ಒಂದು ಪ್ರದೇಶದಲ್ಲಿ ಒಪ್ಪಂದ ಉಲ್ಲಂಘನೆಯಾದರೆ, ಅದನ್ನು ಎಲ್ಲ ಪ್ರದೇಶಗಳಲ್ಲಿಯೂ ಉಲ್ಲಂಘನೆಯಾಗಿಯೇ ಪರಿಗಣಿಸಲಾಗುತ್ತದೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಟ್ರಂಪ್ ತಂದಿರುವ ಈ ತಾತ್ಕಾಲಿಕ ಕದನ ವಿರಾಮ ಎಷ್ಟು ದಿನ ಬಾಳಿಕೆ ಬರಲಿದೆ ಎಂಬುದು ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.