ಮುಂದಿನ 2-3 ದಿನಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶ

ಮುಂಬೈ: ಮುಂದಿನ ಎರಡು-ಮೂರು ದಿನಗಳಲ್ಲಿ ನೈಋತ್ಯ ಮುಂಗಾರು ಕೇರಳಂ ತಲುಪುವ ಸಾಧ್ಯತೆಯಿದ್ದು, ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಕ್ರಮೇಣ ವ್ಯಾಪಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ನೈಋತ್ಯ ಹಾಗೂ ಆಗ್ನೆಯ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಲಕ್ಷದ್ವೀಪ, ಕೇರಳಂ ಮತ್ತು ತಮಿಳುನಾಡಿಗೆ ಮುಂಗಾರು ವ್ಯಾಪಿಸಲು ಪೂರಕ ವಾತಾವರಣ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದೇ ಅವಧಿಯಲ್ಲಿ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಹಾಗೂ ಅದರ ಸಮೀಪದ ಪ್ರದೇಶಗಳಿಗೆ ನೈಋತ್ಯ ಮುಂಗಾರು ಮತ್ತಷ್ಟು ವ್ಯಾಪಿಸಲು ಪರಿಸ್ಥಿತಿ ಅನುಕೂಲಕರವಾಗಿದೆ ಎಂದೂ ಇಲಾಖೆ ಹೇಳಿದೆ.
ಹವಾಮಾನ ಇಲಾಖೆ ಈ ಹಿಂದೆ ಮೇ 26ರಂದು ಮುಂಗಾರು ಕೇರಳಂ ಪ್ರವೇಶಿಸಲಿದೆ ಎಂದು ಮುನ್ಸೂಚನೆ ನೀಡಿತ್ತು. ಆದರೆ, ಮುಂಗಾರು ಆಗಮನ ವಿಳಂಬವಾಗಿದ್ದರಿಂದ ಅದು ಮುಂದಿನ ವಾರ ಪ್ರವೇಶಿಸಬಹುದು ಎಂದು ಇಲಾಖೆ ಮೇ 29ರಂದು ತಿಳಿಸಿತ್ತು.
ಕಳೆದ ವಾರ ಬಿಡುಗಡೆ ಮಾಡಿದ ತನ್ನ ಪರಿಷ್ಕೃತ ಮುನ್ಸೂಚನೆಯಲ್ಲಿ ಈ ವರ್ಷ ಮಳೆಗಾಲದ ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
