ಜಲಪಾತ ವೀಕ್ಷಣೆಗೆ ಬಂದ ಯುವತಿಯರಿಗೆ ಲೈಂಗಿಕ ಕಿರುಕುಳ; ಕೇರಳ ಮೂಲದ ಮೂವರು ಯುವಕರ ವಿರುದ್ಧ ಕೇಸ್ ದಾಖಲು

ಬೆಳ್ತಂಗಡಿ: ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮೂವರು ಯುವಕರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳ ಕಾಸರಗೋಡು ಮೂಲದ ಅಬ್ದುಲ್ ಖಾದರ್ ಅಲ್ತಫ್ (36), ಫೈಜಲ್ ಅದಿಲ್ (27) ಹಾಗೂ ಉಸ್ಮಾನ್ ಸಾಲೀಂ (18) ಎಂಬ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ಯುವತಿಯರು ಈ ಮೂವರು ಯುವಕರೊಂದಿಗೆ ಮೇ 20 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಲಪಾತಕ್ಕೆ ತೆರಳಿರುತ್ತಾರೆ. ಈ ವೇಳೆ ಯುವಕರು, ತಮ್ಮೊಂದಿಗಿದ್ದ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುತ್ತಾರೆ.ಈ ವೇಳೆ ಸಂತ್ರಸ್ತ ಯುವತಿಯರು ಪ್ರತಿರೋಧಿಸಿದ್ದು, ಸ್ಥಳದಲ್ಲಿದ್ದ ಜನರು ಯುವಕರನ್ನು ತಡೆದು, ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ. ಬಳಿಕ ಈ ಮೂವರು ಯುವಕರನ್ನು ಪೊಲೀಸರು ಬೆಳ್ತಂಗಡಿ ಠಾಣೆಗೆ ಕರೆತರಲಾಗಿದೆ.ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ:60/2026 ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ. ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು.