ರಾಜೀವ್ ಗಾಂಧಿ ಹತ್ಯೆ ಕೇಸ್: ಶಿಕ್ಷೆಯಿಂದ ಬಿಡುಗಡೆಯಾದ ಬಳಿಕ ವಕೀಲರಾದ ಎ.ಜಿ. ಪೆರಾರಿವಾಲನ್”

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿದ್ದ ಎ.ಜಿ. ಪೆರಾರಿವಾಲನ್, ಶಿಕ್ಷೆಯಿಂದ ಬಿಡುಗಡೆಯಾದ ಬಳಿಕ ವಕೀಲ ವೃತ್ತಿಗೆ ಪ್ರವೇಶಿಸಿದ್ದಾರೆ. ಸೋಮವಾರ ಅವರು ಕಪ್ಪು ನಿಲುವಂಗಿ ಧರಿಸಿ ವಕೀಲರಾಗಿ ಅಧಿಕೃತವಾಗಿ ಸೇರ್ಪಡೆಯಾದರು.
ತಮಿಳುನಾಡು ಮತ್ತು ಪುದುಚೇರಿ ವಕೀಲರ ಸಂಘದಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಅವರು, ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ನಡೆಸಲಿದ್ದಾರೆ.
1991ರಲ್ಲಿ ನಡೆದ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಪೆರಾರಿವಾಲನ್ ಅವರನ್ನು ಮೇ 18, 2022ರಂದು ಸುಪ್ರೀಂ ಕೋರ್ಟ್ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನ್ನ ಅಸಾಧಾರಣ ಅಧಿಕಾರ ಬಳಸಿ ಬಿಡುಗಡೆ ಮಾಡಲು ಆದೇಶಿಸಿತ್ತು. 30 ವರ್ಷಗಳಿಗೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ್ದುದನ್ನು ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಇದಕ್ಕೂ ಮೊದಲು ಅವರಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು. ಬಳಿಕ ಭಯೋತ್ಪಾದನಾ ಸಂಬಂಧಿತ ಆರೋಪಗಳನ್ನು ಕೈಬಿಡಲಾಗಿತ್ತು ಎಂದು ತಿಳಿದುಬಂದಿದೆ.

ಜೈಲಿನಿಂದ ಬಿಡುಗಡೆಯಾದ ನಂತರ ಪೆರಾರಿವಾಲನ್ ಅವರು ಕಾನೂನು ಅಧ್ಯಯನಕ್ಕೆ ಮುಂದಾಗಿದ್ದರು. ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಕೋರ್ಸ್‌ಗೆ ಸೇರಿ, 2025ರಲ್ಲಿ ಅದನ್ನು ಪೂರ್ಣಗೊಳಿಸಿದರು. ಅದೇ ವರ್ಷ ಅಖಿಲ ಭಾರತ ಬಾರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಕೀಲರಾಗಿ ಅರ್ಹತೆ ಪಡೆದರು.
ತಮ್ಮ ದೀರ್ಘಕಾಲದ ಕಾನೂನು ಹೋರಾಟವೇ ಪ್ರೇರಣೆ ನೀಡಿದೆ ಎಂದು ಹೇಳಿದ ಅವರು, ‘ಮರಣದಂಡನೆ ವಿರೋಧಿ ಪ್ರಕರಣಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಜೈಲಿನಲ್ಲಿದ್ದಾಗಲೇ ಪೆರಾರಿವಾಲನ್ ಅವರು ಶಿಕ್ಷಣದಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು. ತಮಿಳುನಾಡು ಮುಕ್ತ ವಿಶ್ವವಿದ್ಯಾಲಯದ ಡಿಪ್ಲೊಮಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದರು. ಪ್ಲಸ್ ಟು ಪರೀಕ್ಷೆಯಲ್ಲಿ 1,200ರಲ್ಲಿ 1,096 ಅಂಕಗಳನ್ನು ಪಡೆದು ಕೈದಿಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.
ಇದಲ್ಲದೆ, ವೆಲ್ಲೂರು ಮತ್ತು ಪುಝಲ್ ಕೇಂದ್ರ ಕಾರಾಗೃಹಗಳಲ್ಲಿ ಇದ್ದಾಗ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿ ಸೇರಿದಂತೆ ಏಳು ಡಿಪ್ಲೊಮಾ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದರು. ಮರಣದಂಡನೆಯನ್ನು ಎದುರಿಸುತ್ತಿದ್ದ ಅವಧಿಯಲ್ಲಿಯೇ ಈ ಸಾಧನೆಗಳನ್ನು ಮಾಡಿರುವುದು ಗಮನಾರ್ಹ.