₹13 ಲಕ್ಷ ಬಹುಮಾನದ ನಕ್ಸಲ್ ದಂಪತಿ ಬಂಧನ: ಕೂಲಿ ಕಾರ್ಮಿಕರ ಸೋಗಿನಲ್ಲಿ ವೃತ್ತಿಪರ ನಕ್ಸಲ್ ಚಟುವಟಿಕೆ

ರಾಯ್ ಪುರ್(ಚತ್ತೀಸ್ ಗಢ): 13 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದ್ದ ನಕ್ಸಲ್ ದಂಪತಿಯನ್ನು ರಾಜ್ಯ ತನಿಖಾ ದಳ ಚತ್ತೀಸ್ ಗಢದ ರಾಯ್ ಪುರ್ ನಲ್ಲಿ ಬಂಧಿಸಿರುವುದಾಗಿ ವರದಿ ತಿಳಿಸಿದೆ.

ಕೂಲಿ ಕಾರ್ಮಿಕರಾಗಿ ಕೆಲಸ!
ಈ ದಂಪತಿಯ ಬಂಧನ ಸಾಮಾನ್ಯ ನಾಗರಿಕರ ನಡುವೆ ಮಾವೋವಾದಿಗಳು ಹೇಗೆ ವಾಸಿಸುತ್ತಿದ್ದರು ಎಂಬುದು ಬೆಳಕಿಗೆ ಬರುವ ಮೂಲಕ ರಾಯ್ ಪುರ್ ನಾದ್ಯಂತ ಆಘಾತ ವ್ಯಕ್ತವಾಗಿದೆ.
ಹೌದು ಈ ಮಾವೋವಾದಿ ದಂಪತಿ ಕೂಲಿ ಕಾರ್ಮಿಕರಾಗಿ, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.
ಬಂಧಿತ ಆರೋಪಿಗಳನ್ನು ಜಗ್ಗು ಕುರ್ಸಮ್ ಅಲಿಯಾಸ್ ರವಿ ಅಲಿಯಾಸ್ ರಮೇಶ್ (28) ಹಾಗೂ ಆತನ ಪತ್ನಿ ಕಮಲ ಕುರ್ಸಮ್(27ವರ್ಷ) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಸೆಪ್ಟೆಂಬರ್ 23ರಂದು ಚಂಗೋರಾಭಾಟ್ಟದಲ್ಲಿ ಬಂಧಿಸಲಾಗಿತ್ತು.
ತಮ್ಮ ಚಲನವಲನ ಗಮನಿಸುತ್ತಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರೂ ರಾಯ್ ಪುರ್ ನಲ್ಲಿ ಆಗಾಗ ವಾಸದ ಮನೆಯನ್ನು ಬದಲಾಯಿಸುತ್ತಿದ್ದರು. ಜತೆಗೆ ತಮ್ಮ ಮೇಲೆ ಅನುಮಾನ ಬರಬಾರದು ಎಂಬ ನೆಲೆಯಲ್ಲಿ ತಮ್ಮನ್ನು ಕೂಲಿ ಕಾರ್ಮಿಕರು ಎಂಬಂತೆ ಗುರುತಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಕ್ಸಲ್ ದಂಪತಿ ಬಗ್ಗೆ ಮಾಹಿತಿ ನೀಡಿದವರಿಗೆ ಸರ್ಕಾರ ಬಹುಮಾನ ಘೋಷಿಸಿತ್ತು. ಜಗ್ಗು ತಲೆಗೆ 8 ಲಕ್ಷ ರೂ. ಹಾಗೂ ಕಮಲಾ ತಲೆಗೆ 5 ಲಕ್ಷ ರೂ. ನಗದು ಬಹುಮಾನ ಘೋಷಿಸಿತ್ತು ಎಂದು ವರದಿ ತಿಳಿಸಿದೆ.
ಪೊಲೀಸರ ದಾಳಿಯ ಸಂದರ್ಭದಲ್ಲಿ ಆಘಾತಕಾರಿ ಸಾಕ್ಷಿ ಲಭ್ಯವಾಗಿತ್ತು. ದಂಪತಿಯ ಬಾಡಿಗೆ ಮನೆಯಲ್ಲಿ ಪೊಲೀಸರು 10 ಗ್ರಾಂ ಚಿನ್ನದ ಬಿಸ್ಕೆಟ್, 1.14 ಲಕ್ಷ ರೂಪಾಯಿ ನಗದು, ಎರಡು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ನಕ್ಸಲ್ ದಂಪತಿಯ ಮೊಬೈಲ್ ಕರೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಇಬ್ಬರು ಹಿರಿಯ ನಕ್ಸಲ್ ಕಮಾಂಡರ್ ಗಳಿಗೆ ಔಷಧ, ಲಾಜಿಸ್ಟಿಕ್ಸ್ ಸರಬರಾಜು ಮಾಡುತ್ತಿರುವುದಾಗಿ ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಸ್ಥಳೀಯ ನೆರೆಹೊರೆಯವರ ಪ್ರಕಾರ, ಈ ದಂಪತಿ ಯಾರೊಬ್ಬರ ಬಳಿಯೂ ಮಾತನಾಡುತ್ತಿರಲಿಲ್ಲ. ದಿನಸಿ ಸಾಮಾನನ್ನೂ ಖರೀದಿಸುತ್ತಿರಲಿಲ್ಲ. ಬೆಳಗ್ಗೆ ಬೇಗ ಕೆಲಸಕ್ಕೆ ತೆರಳಿ, ತಡವಾಗಿ ಮನೆಗೆ ಮರಳುತ್ತಿದ್ದರು. ಅವರ ಮನೆಗೆ ಬೇರೆ ಯಾರು ಬಂದಿದ್ದನ್ನು ನೋಡಿಲ್ಲ ಎಂದು ತಿಳಿಸಿದ್ದಾರೆ.