ತಂದೂರಿ ಒಲೆಗೆ ಬಿದ್ದು 11 ವರ್ಷದ ಬಾಲಕನಿಗೆ ಗಂಭೀರ ಗಾಯ!

ಬಸ್ತಿ (ಉತ್ತರ ಪ್ರದೇಶ): ಮದುವೆ ಸಮಾರಂಭವೊಂದರಲ್ಲಿ ರಸಗುಲ್ಲ ತಿಂದ ಎಂಬ ಕಾರಣಕ್ಕೆ ಅಡುಗೆ ಕೆಲಸದವನೊಬ್ಬ ಬಾಲಕನನ್ನು ಉರಿಯುವ ತಂದೂರಿ ಒಲೆಗೆ ಎಸೆದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯ ಈ ಕ್ರೂರ ಕೃತ್ಯದಿಂದಾಗಿ 11 ವರ್ಷದ ಬಾಲಕ ತೀವ್ರವಾಗಿ ಸುಟ್ಟುಹೋಗಿದ್ದು, ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.ಗೋಂಡಾ ಜಿಲ್ಲೆಯ ದುರ್ಜನ್‌ಪುರ ಮೂಲದ ಚಮನ್ ತನ್ನ ಅಜ್ಜಿಯ ಜೊತೆ ಬಸ್ತಿ ಜಿಲ್ಲೆಯ ಮಲೌಲಿ ಗೋಸಾಯಿ ಗ್ರಾಮದಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆಗೆ ತೆರಳಿದ್ದ. ಊಟದ ಕೌಂಟರ್‌ನಲ್ಲಿ ಬಾಲಕ ಪದೇ ಪದೇ ರಸಗುಲ್ಲ ಪಡೆಯುತ್ತಿದ್ದುದನ್ನು ಕಂಡು ಆಕ್ರೋಶಗೊಂಡ ಕ್ಯಾಟರಿಂಗ್ ಗುತ್ತಿಗೆದಾರ, ಮೊದಲು ಬೆದರಿಕೆ ಹಾಕಿದ್ದಾನೆ. ಆತನ ಬೆದರಿಕೆ ಮಾತನ್ನು ಬಾಲಕ ಕೇಳದಿದ್ದಾಗ, ಅತನನ್ನು ಎತ್ತಿ ಉರಿಯುವ ತಂದೂರಿ ಒಲೆಯ ಮೇಲೆ ಕೂರಿಸಿದ್ದಾನೆ. ಈ ವೇಳೆ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಸಮತೋಲನ ತಪ್ಪಿ ಒಲೆಯೊಳಗೆ ಬಿದ್ದಿದ್ದಾನೆ. ಮಗುವಿನ ಚೀರಾಟ ಕೇಳಿ ಓಡಿ ಬಂದ ಕುಟುಂಬಸ್ಥರು ಕೂಡಲೇ ಆತನನ್ನು ಹೊರತೆಗೆದಿದ್ದಾರೆ.

ಅಷ್ಟರಲ್ಲೇ ಬಾಲಕನ ಮುಖದಿಂದ ಸೊಂಟದವರೆಗೆ ದೇಹವು ತೀವ್ರವಾಗಿ ಸುಟ್ಟುಹೋಗಿತ್ತು. ಕೂಡಲೇ ಆತನನ್ನು ಅಯೋಧ್ಯೆಯ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋ ಮೆಡಿಕಲ್ ಕಾಲೇಜಿಗೆ ವರ್ಗಾಯಿಸಲಾಗಿದೆ.
ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಮಗುವಿನ ಮಾವ ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದು, ಮಗುವಿನ ಸ್ಥಿತಿ ಸದ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.