‘ವರ್ಕ್ ಫ್ರಂ ಹೋಮ್’ ಜಾಹೀರಾತು ನಂಬಿ ₹27 ಲಕ್ಷ ಕಳೆದುಕೊಂಡ ಮಹಿಳೆ

ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ನೋಡುತ್ತಿದ್ದಾಗ ಬಂದ ವರ್ಕ್ ಫ್ರಂ ಹೋಮ್ ಎನ್ನುವ ಜಾಹೀರಾತು ನಂಬಿ ಮಹಿಳೆಯೊಬ್ಬರು 27,01,268 ರೂ. ವಂಚನೆಗೊಳಗಾಗ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಮಹಿಳೆ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿದಾಗ ಅದು ಅಪರಿಚಿತ ವ್ಯಕ್ತಿಯ ವಾಟ್ಸ್‌ಆಯಪ್‌ಗೆ ಹೋಗಿದೆ.

ಅದರಲ್ಲಿ ಗ್ಲೋಬಲ್ ಪಾರ್ಟ್ ಟೈಂ ಜಾಬ್ ಎನ್ನುವ ಸಂದೇಶ ಬಂದಿದ್ದು, ಶೇರ್ ಚಾಟ್‌ನಲ್ಲಿ ಲೈಕ್ ಕೊಟ್ಟರೆ ಒಂದು ಟಾಸ್ಕ್ಗೆ 120 ರೂ.ನಂತೆ ಹಾಗೂ ದಿನಕ್ಕೆ 20 ಟಾಸ್ಕ್ ಪೂರ್ಣಗೊಳಿಸಿದರೆ 5 ಸಾವಿರ ರೂ. ನೀಡುವುದಾಗಿ ನಂಬಿಸಿದ್ದಾರೆ. ಮೊದಲ ದಿನವೇ 20 ಟಾಸ್ಕ್ ಪೂರ್ಣಗೊಳಿಸಿದ್ದು, 320 ರೂ. ಖಾತೆಗೆ ಜಮಾ ಆಗಿದೆ. ಅನಂತರ ಲಾಭಾಂಶ ಪಡೆಯುವ ಉದ್ದೇಶದಿಂದ ಅಪರಿಚಿತರು ತಿಳಿಸಿದ ಬೇರೆ ಬೇರೆ ಬ್ಯಾಂಕ್ ಖಾತೆಗೆ ಜೂ.13ರಿಂದ 20ರ ವರೆಗೆ ಹಂತ ಹಂತವಾಗಿ 27,01,268 ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ.
ಕೊನೆಗೆ ತಾನು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಹೋದಾಗ ಆಗಿಲ್ಲ. ಈ ಬಗ್ಗೆ ಅಪರಿಚಿತ ವ್ಯಕ್ತಿಗೆ ಮೆಸೇಜ್ ಮಾಡಿದಾಗ ಆತನಿಂದ ಯಾವುದೇ ಉತ್ತರ ಬಂದಿಲ್ಲ. ಕೊನೆಗೆ ತಾನು ಮೋಸ ಹೋಗಿರುವುದು ಅರಿವಾಗಿ ದೂರು ನೀಡಿದ್ದಾರೆ.