ಮಹಿಳೆಯನ್ನು ರಸ್ತೆಯಲ್ಲೇ ಎಳೆದಾಡಿ ಸರ ಅಪಹರಣ; ಸದಾಶಿವ ನಗರದಲ್ಲಿ ಖದೀಮರ ಅಟ್ಟಹಾಸ!

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸರಗಳ್ಳರ ಅಟ್ಟಹಾಸ ಮಿತಿಮೀರಿದ್ದು, ಮಹಿಳೆಯೊಬ್ಬರನ್ನು ರಸ್ತೆಯಲ್ಲೇ ಎಳೆದಾಡಿ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಸದಾಶಿವ ನಗರದಲ್ಲಿ ನಡೆದಿದೆ. ಈ ಭೀಕರ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸಿದೆ. ಎರಡು ದಿನಗಳ ಹಿಂದೆ ಸದಾಶಿವ ನಗರದ ರಸ್ತೆಯಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಖದೀಮ ಆಕೆಯನ್ನು ಗುರಿಯಾಗಿಸಿಕೊಂಡಿದ್ದಾನೆ. ಮಹಿಳೆ ಏಕಾಂಗಿಯಾಗಿರುವುದನ್ನು ಗಮನಿಸಿದ ಕಳ್ಳ, ಏಕಾಏಕಿ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿದ್ದಾನೆ. ಈ ವೇಳೆ ಮಹಿಳೆ ಪ್ರತಿರೋಧ ತೋರಿದಾಗ, ಕಳ್ಳ ಆಕೆಯನ್ನು ರಸ್ತೆಯಲ್ಲೇ ಅಮಾನವೀಯವಾಗಿ ಎಳೆದಾಡಿದ್ದಾನೆ.
ಕಳ್ಳನ ಎಳೆದಾಟಕ್ಕೆ ಮಹಿಳೆ ರಸ್ತೆಯ ಮೇಲೆ ಬಿದ್ದರೂ ಸಹ, ಆತ ಮಾತ್ರ ಬಿಡದೆ ಬಲವಂತವಾಗಿ ಸರವನ್ನು ಕಿತ್ತುಕೊಂಡು ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾನೆ. ಈ ಭಯಾನಕ ದೃಶ್ಯವನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಜನನಿಬಿಡ ಪ್ರದೇಶಗಳಿಗಿಂತ ಏಕಾಂತದ ರಸ್ತೆಗಳನ್ನು ಟಾರ್ಗೆಟ್ ಮಾಡುತ್ತಿರುವ ಕಳ್ಳರು, ಹಾಡಹಗಲೇ ಇಂತಹ ಕೃತ್ಯವೆಸಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇಷ್ಟೆಲ್ಲಾ ದೊಡ್ಡ ಘಟನೆ ನಡೆದಿದ್ದರೂ ಸಹ ಸಂತ್ರಸ್ತ ಮಹಿಳೆ ಈವರೆಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿಲ್ಲ ಎಂದು ತಿಳಿದುಬಂದಿದೆ. ಆದರೆ, ವೈರಲ್ ಆಗಿರುವ ಸಿಸಿಟಿವಿ ದೃಶ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಸ್ವಯಂಪ್ರೇರಿತವಾಗಿ ಮಹಿಳೆಯನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಜೊತೆಗೆ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಕಳ್ಳನಿಗಾಗಿ ಬಲೆ ಬೀಸಿದ್ದಾರೆ.
