ಪಕ್ಷಾಂತರದ ಬೆನ್ನಲ್ಲೇ ರಾಘವ್ ಛಡ್ಡಾಗೆ ಬಿಗ್ ಶಾಕ್: 24 ಗಂಟೆಯಲ್ಲಿ 10 ಲಕ್ಷ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಲಾಸ್!

ಹೊಸ ದಿಲ್ಲಿ: ಇಡೀ ರಾಷ್ಟ್ರ ರಾಜಧಾನಿ ದಿಲ್ಲಿಯ ರಾಜಕಾರಣದಲ್ಲಿ ಕಂಪನ ಸೃಷ್ಟಿಸಿ, ಆಮ್ ಆದ್ಮಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ ರಾಘವ್ ಛಡ್ಯಾ ತಮ್ಮ ಈ ನಡೆಯಿಂದ ಜನಪ್ರಿಯತೆಯನ್ನು ಕಳೆದುಕೊಂಡಿರುವಂತೆ ಕಂಡು ಬರುತ್ತಿದೆ. ಬಿಜೆಪಿಗೆ ಪಕ್ಷಾಂತರ ಮಾಡುವುದಕ್ಕೂ ಮುನ್ನ, ಇನ್ನಾಗ್ರಾಮ್ ನಲ್ಲಿ 14.6 ದಶಲಕ್ಷ ಫಾಲೋವರ್ ಗಳನ್ನು ಹೊಂದಿದ್ದ 37 ವರ್ಷದ ರಾಘವ್ ಚಡ್ಯಾ ಕೇವಲ 24 ಗಂಟೆಯ ಅವಧಿಯಲ್ಲಿ ಸುಮಾರು 10 ಲಕ್ಷ ಫಾಲೋವರ್ ಗಳನ್ನು ಕಳೆದುಕೊಂಡಿದ್ದಾರೆ. ಅವರ ಫಾಲೋವರ್ ಗಳ ಸಂಖ್ಯೆ ಇದೀಗ 13.5 ದಶಲಕ್ಷಕ್ಕೆ ಕುಸಿದಿದೆ. ಯುವಕರು ಅದರಲ್ಲೂ ಜೆನ್ ಝೀ ತಲೆಮಾರಿನವರು ತಿರುಗಿ ಬಿದ್ದಿರುವುದರಿಂದ, ರಾಘವ್ ಛಡ್ಡಾ ಜನಪ್ರಿಯತೆಯಲ್ಲಿ ಕುಸಿತವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ನಿನ್ನೆಯಷ್ಟೇ (ಶುಕ್ರವಾರ) ತಮ್ಮ ಮಾತೃಪಕ್ಷ ಆಮ್ ಆದ್ಮ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ರಾಘವ್ ಚಡ್ತಾ ತಮ್ಮೊಂದಿಗೆ ಇನ್ನೂ ಆರು ಮಂದಿ ಆಮ್ ಆದ್ಮ ಪಕ್ಷದ ರಾಜ್ಯಸಭಾ ಸದಸ್ಯರನ್ನು ಬಿಜೆಪಿಗೆ ಕರೆದೊಯ್ದಿದ್ದರು. ಇದರಿಂದ ರಾಜಕೀಯ ಅಸ್ಥಿರತೆಗೆ ಗುರಿಯಾಗಿರುವ ಅರವಿಂದ್ ಕೇಜ್ರವಾಲ್ ನೇತೃತ್ವದ ಆಮ್ ಆದ್ಮಪಕ್ಷಕ್ಕೆ ತನ್ನ ಸದಸ್ಯರನ್ನು ಹಿಡಿದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ನಿರೀಕ್ಷೆಯಂತೆ ರಾಘವ್ ಛಡ್ಡಾ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಇದರ ಸುಳಿವರಿತೇ ಆಮ್ ಆದ್ಮಪಕ್ಷ ಕೂಡಾ ಅವರನ್ನು ಎರಡು ವಾರಗಳ ಹಿಂದೆ ರಾಜ್ಯಸಭೆಯ ಪಕ್ಷದ ಉಪ ನಾಯಕ ಸ್ಥಾನದಿಂದ ಪದಚ್ಯುತಗೊಳಿಸಿತ್ತು. ಆದರೆ, ರಾಘವ್ ಛಡ್ಡಾರ ಈ ನಡೆಯು ಜೆನ್ ಝೀ ತಲೆಮಾರಿಗೆ ಅಷ್ಟಾಗಿ ಇಷ್ಟವಾಗಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ದತ್ತಾಂಶಗಳ ಪ್ರಕಾರ, ರಾಘವ್ ಛಡ್ಡಾ ಬಿಜೆಪಿಗೆ ಪಕ್ಷಾಂತರ ಮಾಡಿದ ಕೇವಲ 24 ಗಂಟೆಗಳಲ್ಲಿ ಸುಮಾರು 10 ಲಕ್ಷ ಫಾಲೋವರ್ ಗಳನ್ನು ಕಳೆದುಕೊಂಡಿದ್ದಾರೆ. ಶುಕ್ರವಾರ 37 ವರ್ಷದ ರಾಜ್ಯಸಭಾ ಸಂಸದ ರಾಘವ್ ಛಡ್ಡಾಗೆ 14.6 ದಶಲಕ್ಷ ಫಾಲೋವರ್ ಗಳಿದ್ದರು. ಆದರೆ, ಇಂದು (ಶನಿವಾರ) ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಅವರ ಫಾಲೋವರ್ ಗಳ ಸಂಖ್ಯೆ 13.5 ದಶಲಕ್ಷಕ್ಕೆ ಕುಸಿದಿದೆ.
“ಜೆನ್ ಝೀ ತಲೆಮಾರು ಇನ್ಸಾಗ್ರಾಮ್ ನಲ್ಲಿ ನಡೆಸಿದ ವೈರಲ್ ಅಭಿಯಾನದ ಕಾರಣಕ್ಕೆ ಕಳೆದ 24 ಗಂಟೆಗಳಲ್ಲಿ ರಾಘವ್ ಛಡ್ಡಾರ ಫಾಲೋವರ್‌ಗಳ ಸಂಖ್ಯೆ 10 ಲಕ್ಷದಷ್ಟು ಕುಸಿತವಾಗಿದೆ” ಎಂದು ಎನ್‌ಸಿಪಿ (ಎಸ್ಪಿ) ಬಣದ ವಕ್ತಾರ ಅನೀಶ್ ಗವಾಂಡೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ಇಂಟರ್ನೆಟ್ ನಿಮ್ಮನ್ನು ರಾತ್ರೋರಾತ್ರಿ ಹೀರೋ ಕೂಡಾ ಮಾಡಬಲ್ಲದು, ಹಾಗೆಯೇ ಅದೇ ಇಂಟರ್ನೆಟ್ ನಿಮ್ಮನ್ನು ರಾತ್ರೋರಾತ್ರಿ ಝೀರೋ ಕೂಡಾ ಮಾಡಬಲ್ಲದು” ಎಂದು ಅವರು ರಾಘವ್ ಛಡ್ಡಾರನ್ನು ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ವಾಸ್ತವವಾಗಿ ರಾಜಕಾರಣದಲ್ಲಿ ಬಹುತೇಕ ಉಪೇಕ್ಷೆಗೊಳಗಾಗುವ ಜನರ ದೈನಂದಿನ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸದನದಲ್ಲಿ ನಿರಂತರವಾಗಿ ಪ್ರಸ್ತಾಪಿಸುವ ಮೂಲಕ ರಾಘವ್ ಛಡ್ಡಾ ಯುವಜನರ ನಡುವೆ ತಮಗೊಂದು ಸ್ಥಾನ ಕಲ್ಪಿಸಿಕೊಂಡಿದ್ದರು. ಪುರುಷರಿಗೆ ಪಿತೃತ್ವ ರಜೆ, ಸಂಚಾರ ದಟ್ಟಣೆ ಸಮಸ್ಯೆ ದೂರಸಂಪರ್ಕ ಕಂಪೆನಿಗಳ ದೈನಂದಿನ ದತ್ತಾಂಶ ಮಿತಿಯಿಂದ ಹಿಡಿದು, ವಿಮಾನ ನಿಲ್ದಾಣದಲ್ಲಿ ಸಮೋಸಾಗಳ ದುಬಾರಿ ಬೆಲೆ, ಕೇವಲ 10 ನಿಮಿಷಗಳ ಡೆಲಿವರಿ ಮಾದರಿಯ ಮೂಲಕ ಅಸಂಘಟಿತ ಕಾರ್ಮಿಕರ ದುರ್ಬಳಕೆಯಂತಹ ಮೃದು ವಿಷಯಗಳವರೆಗೆ ಅವರು ಸದನದಲ್ಲಿ ಧ್ವನಿ ಎತ್ತಿದ್ದರು. ಅಸಂಘಟಿತ ಕಾರ್ಮಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಅವರೇ ಒಂದು ದಿನದ ಮಟ್ಟಿಗೆ ಬ್ಲಿಂಕಿಟ್ ಡೆಲಿವರಿ ಪಾರ್ಟ್ನರ್ ಆಗಿಯೂ ಕಾರ್ಯನಿರ್ವಹಿಸಿದ್ದರು.
ಇದರಿಂದಾಗಿ, ಕಡ್ಡಾಯ 10 ನಿಮಿಷಗಳ ಡೆಲಿವರಿ ಗಡುವನ್ನು ತೆಗೆದು ಹಾಕುವಂತೆ ಕೇಂದ್ರ ಸರಕಾರ ಆನ್ ಲೈನ್ ಕಂಪೆನಿಗಳಿಗೆ ನಿರ್ದೇಶನ ನೀಡಬೇಕಾಗಿ ಬಂದಿತ್ತು. ಈ ಎಲ್ಲ ವಿಷಯಗಳು ರಾಜಕೀಯದಲ್ಲಿ ರಾಘವ್ ಛಡ್ಡಾ ಅವರ ವ್ಯಕ್ತಿತ್ವವನ್ನು ರೂಪಿಸಿದ್ದವು.
ಜೆನ್ ಝೀ ಕೇಂದ್ರಿತ ವಿಷಯಗಳನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ, ಅವರು ಸಾಂಪ್ರದಾಯಿಕ ರಾಜಕಾರಣ ಹಾಗೂ ಯುವಕರ ಆಕಾಂಕ್ಷೆಗಳ ನಡುವಿನ ಸೇತುವೆಯಂತೆ ಕೆಲಸ ಮಾಡಿದ್ದರು. ಇದರಿಂದಾಗಿ ರಾಘವ್ ಛಡ್ಡಾ ವಿಭಿನ್ನ ರಾಜಕಾರಣಿಯಂತೆ ಕಂಡು ಬಂದಿದ್ದರು.
ರಾಘವ್ ಛಡ್ಡಾರನ್ನು ರಾಜ್ಯಸಭೆಯ ಪಕ್ಷದ ಉಪ ನಾಯಕ ಸ್ಥಾನದಿಂದ ಆಮ್ ಆದ್ಮಪಕ್ಷ ತೆಗೆದು ಹಾಕಿದಾಗಲೂ, ಅವರಿಗೆ ಭಾರಿ ಜನಬೆಂಬಲ ವ್ಯಕ್ತವಾಗಿತ್ತು. ಆಗ, “ರಾಘವ್ ಛಡ್ಡಾ ತಮ್ಮದೇ ಜೆನ್ ಝೀ ಪಕ್ಷವನ್ನು ಸ್ಥಾಪಿಸಬೇಕು” ಎಂದು ಸಲಹೆ ನೀಡಿದ್ದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರ ರೀಲ್ ಅನ್ನು ಅವರು ತಮ್ಮ ಇನ್ಸಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.