Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

30 ಅಡಿ ಆಳದ ಪಾಳುಬಾವಿಗೆ ಬಿದ್ದ ಕಾಡಾನೆ; 8 ಗಂಟೆಗಳ ಸುದೀರ್ಘ ಕಾರ್ಯಾಚರಣೆ ಬಳಿಕ ರಕ್ಷಣೆ!

Spread the love

ಸುಳ್ಯ : ಪೆರಾಜೆ ಗ್ರಾಮದ ಕಲ್ಲಚರ್ಪ ಎಂಬಲ್ಲಿ ಪಾಳುಬಾವಿಗೆ ಬಿದ್ದು ಅಪಾಯಕ್ಕೆ ಸಿಲುಕಿದ್ದ ಒಂಟಿಸಲಗವೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು ಎಂಟು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಯಶಸ್ವಿಯಾಗಿ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಆನೆಯು ಮತ್ತೆ ಕಾಡಿಗೆ ಮರಳಿದೆಯಾದರೂ, ಸ್ಥಳೀಯರಲ್ಲಿ ಆನೆಯ ಆತಂಕ ಮಾತ್ರ ಇನ್ನೂ ದೂರವಾಗಿಲ್ಲ.ಎಪ್ರಿಲ್ 12ರ ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ಪೆರಾಜೆ ನಿವಾಸಿ ರಾಮ ನಾಯ್ಕ ಎಂಬವರ ತೋಟದಲ್ಲಿ ಆನೆಯ ಘೀಳಿಡುವ ಶಬ್ದ ನಿರಂತರವಾಗಿ ಕೇಳಿಸಿದೆ. ಸಂಶಯಗೊಂಡು ಸ್ಥಳೀಯರು ಹೋಗಿ ನೋಡಿದಾಗ ಸುಮಾರು 30 ಅಡಿ ಆಳದ ಪಾಳುಬಾವಿಯಲ್ಲಿ ಕಾಡಾನೆಯೊಂದು ಬಿದ್ದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಬಾವಿಯು ತೋಟದ ಎತ್ತರದ ಭಾಗದಲ್ಲಿದ್ದ ಕಾರಣ, ಆನೆಯನ್ನು ಮೇಲಕ್ಕೆ ಎತ್ತುವ ಬದಲು ಇಳಿಜಾರು ಭಾಗದಿಂದ ಜೆಸಿಬಿ ಬಳಸಿ ಮಣ್ಣು ಕೊರೆಯುವ ಪ್ಲಾನ್ ಮಾಡಲಾಯಿತು. ಇಂದು (ಎಪ್ರಿಲ್ 13) ಬೆಳಿಗ್ಗೆ 6 ಗಂಟೆಗೆ ಆರಂಭವಾದ ಈ ಕಾರ್ಯಾಚರಣೆಯು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಯಶಸ್ವಿಯಾಯಿತು.ಬಾವಿಯಿಂದ ಹೊರಬಂದ ಆನೆಯು ರೊಚ್ಚಿಗೆದ್ದು ತನ್ನನ್ನು ರಕ್ಷಿಸಲು ಬಳಸಿದ್ದ ಜೆಸಿಬಿಯನ್ನೇ ಗುರಿಯಾಗಿಸಿ ಜೋರಾಗಿ ದೂಡಿತು. ಬಳಿಕ ಅಲ್ಲಿಂದ ಕೃಷಿ ತೋಟದೊಳಗೆ ನುಗ್ಗಿದ ಆನೆಯನ್ನು ಪಟಾಕಿ ಸಿಡಿಸುವ ಮೂಲಕ ಪೂವಾಜೆ ರಕ್ಷಿತಾರಣ್ಯಕ್ಕೆ ಅರಣ್ಯ ಸಿಬ್ಬಂದಿ ಓಡಿಸಿದರು. ವಿಶೇಷವೆಂದರೆ, ಈ ಹಿಂದೆ ಇಂತಹ ಕಾರ್ಯಾಚರಣೆಗಳಿಗೆ ಕೊಡಗು ಜಿಲ್ಲೆಯ ಸಿಬ್ಬಂದಿಯನ್ನು ಅವಲಂಬಿಸಲಾಗುತ್ತಿತ್ತು. ಆದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 150ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳೇ ಸೇರಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.ಆನೆ ಸದ್ಯಕ್ಕೆ ಕಾಡು ಸೇರಿದ್ದರೂ, ಪೆರಾಜೆ ಮತ್ತು ಸುತ್ತಮುತ್ತಲ ಪ್ರದೇಶದ ಕೃಷಿ ತೋಟಗಳಿಗೆ ಮತ್ತೆ ಆನೆ ನುಗ್ಗುವ ಭೀತಿ ಗ್ರಾಮಸ್ಥರಲ್ಲಿ ಮನೆಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆಯು ಮೈಕ್ ಮೂಲಕ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.


Spread the love
Share:

administrator

Leave a Reply

Your email address will not be published. Required fields are marked *