ಅಮೆರಿಕಾ: ವಾಷಿಂಗ್ಟನ್ ಪೇಪರ್ ಮಿಲ್ನಲ್ಲಿ ರಾಸಾಯನಿಕ ಟ್ಯಾಂಕ್ ಸ್ಫೋಟ; ಒಬ್ಬ ಸಾ*ವು, 9 ಮಂದಿ ನಾಪತ್ತೆ!

ವಾಷಿಂಗ್ಟನ್: ಅಮೆರಿಕದ ನೈರುತ್ಯ ವಾಷಿಂಗ್ಟನ್ ಪ್ರದೇಶದ ಪಲ್ಸ್ ಮತ್ತು ಕಾಗದ ಕಾರ್ಖಾನೆಯಲ್ಲಿ ಮಂಗಳವಾರ ರಾಸಾಯನಿಕ ಟ್ಯಾಂಕ್ ಅಂತಃಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಇತರ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ಕಂಪನಿ ಅಧಿಕಾರಿಗಳು ಪ್ರಕಟಿಸಿದ್ದಾರೆ.
“ಸಾಮೂಹಿಕ ವಿನಾಶದ ಚಿತ್ರಣ ಕಂಡುಬಂದಿದೆ” ಎಂದು ಅಗ್ನಿಶಾಮಕ ದಳದ ಬೆಟಾಲಿಯನ್ ಮುಖ್ಯಸ್ಥ ಮೈಕ್ ಗೋರ್ಸಚ್ ಹೇಳಿದ್ದಾರೆ. ತುರ್ತು ಸ್ಪಂದನೆ ತಂಡಗಳು ಲಾಂಗ್ವ್ಯೂ ಮತ್ತು ವ್ಯಾಂಕೋವರ್ ಆಸ್ಪತ್ರೆಗಳಿಗೆ ಸಂತ್ರಸ್ತರನ್ನು ಕರೆದೊಯ್ಯುವ ಮುನ್ನ ಸೋಂಕುಮುಕ್ತಗೊಳಿಸಿವೆ. ಸುಮಾರು 40 ಮಂದಿ ಅಗ್ನಿಶಾಮಕ ಸಿಬ್ಬಂದಿ, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಪ್ರಾದೇಶಿಕ ವಿಕೋಪ ಸಲಕರಣೆ ತಂಡಗಳು ತುರ್ತು ಕಾರ್ಯಾಚರಣೆ ಕೈಗೊಂಡಿವೆ ಎಂದು ಅವರು ವಿವರಿಸಿದ್ದಾರೆ.

ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 7.15ರ ವೇಳೆಗೆ ದುರಂತ ಸಂಭವಿಸಿದ್ದು, ಶೋಧ ಕಾರ್ಯಾಚರಣೆ ತಡರಾತ್ರಿಯವರೆಗೂ ಮುಂದುವರಿದಿದೆ. ಸಂತ್ರಸ್ತರ ಕುಟುಂಬಗಳಿಗೆ ಮಾಹಿತಿ ನೀಡುವವರೆಗೂ ಅವರ ಗುರುತು ಬಹಿರಂಗಪಡಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಂಪನಿಯು ಪಲ್ಸ್ ಮತ್ತು ಕಾಗದ ಕಾರ್ಖಾನೆಯನ್ನು ನಿರ್ವಹಿಸುತ್ತಿದ್ದು, ಟಿಶೂ ಪ್ರಿಂಟಿಂಗ್ ಪೇಪರ್, ಪೆಟ್ಟಿಗೆ, ಕಪ್ ಮತ್ತು ಪ್ಲೇಟ್ ಗಳು ಸೇರಿದಂತೆ ದ್ರವ ಪ್ಯಾಕೇಜಿಂಗ್ ಘಟಕವೂ ಇದೆ. 1000ಕ್ಕೂ ಹೆಚ್ಚು ಮಂದಿ ಇಲ್ಲಿ ಉದ್ಯೋಗಿಗಳಾಗಿದ್ದಾರೆ ಎಂದು ವಾಷಿಂಗ್ಟನ್ನ ಪರಿಸರ ರಕ್ಷಣಾ ಇಲಾಖೆ ಹೇಳಿದೆ.
ಕಂಪನಿಯ ರಾಸಾಯನಿಕ ಟ್ಯಾಂಕ್ ಒಡೆದು ಹಲವು ಸಾವುಗಳು ಮತ್ತು ಸುಟ್ಟಗಾಯ ಹಾಗೂ ರಾಸಾಯನಿಕ ಸೇವನೆಯಿಂದ ಗಂಭೀರ ಗಾಯಗಳ ಪ್ರಕರಣಗಳು ಸಂಭವಿಸಿವೆ ಎಂದು ನಿಪ್ಪಾನ್ ಡೈನವೇವ್ ಪ್ಯಾಕೇಜಿಂಗ್ ಕಂಪನಿ ಮತ್ತು ಕಾನೂನು ಜಾರಿ ಅಧಿಕಾರಿಗಳು ಜಂಟಿ ಹೇಳಿಕೆಯಲ್ಲಿ ವಿವರಿಸಿದ್ದಾರೆ. ಸಾರ್ವಜನಿಕರಿಗೆ ತಕ್ಷಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.