ಟ್ರಂಪ್ ಶಾಂತಿ ಮಾತುಕತೆ ವರದಿ ಸುಳ್ಳು ಎಂದ ಇರಾನ್; ಯುದ್ಧ ಅಂತ್ಯಕ್ಕೆ ಅಮೆರಿಕ ಅಧ್ಯಕ್ಷರಿಂದ ಹೊಸ ಗಡುವು

ಟೆಹ್ರಾನ್: ಶಾಂತಿ ಮಾತುಕತೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯನ್ನು ಇರಾನ್ ನಕಲಿ ಸುದ್ದಿ ಎಂದು ಹೇಳಿದ್ದು ಅಂತಹ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
“ಇರಾನ್ ಜೊತೆ ಒಪ್ಪಂದಕ್ಕೆ ಸಂಬಂಧಿಸಿ ಮಾತುಕತೆಗಳು ನಡೆಯುತ್ತಿವೆ. ಈ ಬಾರಿ ಇರಾನ್ ಸಮಸ್ಯೆ ಬಗೆಹರಿಸಬೇಕೆಂದು ಬಯಸುತ್ತದೆ. ಅವರಿಗೆ ಶಾಂತಿ ಬೇಕಿದೆ” ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಆದರೆ, ಅಮೆರಿಕದೊಂದಿಗೆ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ಇರಾನ್ ಸ್ಪಷ್ಟವಾಗಿ ಹೇಳಿದೆ. ಇದು ನಕಲಿ ಸುದ್ದಿಯಾಗಿದ್ದು, ಜಾಗತಿಕ ಹಣಕಾಸು ಮತ್ತು ತೈಲ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಲು ಇಂತಹ ಹೇಳಿಕೆಯನ್ನು ನೀಡಲಾಗುತ್ತಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್ ಬಘರ್ ಗಾಲಿಬಾಫ್ ಹೇಳಿದ್ದಾರೆ.
ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು 5 ದಿನಗಳವರೆಗೆ ಮುಂದೂಡಲು ಅಮೆರಿಕ ಮಿಲಿಟರಿಗೆ ಸೂಚಿಸಿದ ಬೆನ್ನಲ್ಲೆ ಅಮೆರಿಕ ಮತ್ತು ಇರಾನ್ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿವೆ ಮತ್ತು ಎರಡೂ ಕಡೆಯವರು ಒಪ್ಪಂದದ ‘ಪ್ರಮುಖ ಅಂಶಗಳನ್ನು ಹೊಂದಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.
