ಒಂದು ವರ್ಷದ ಹಿಂದೆ ವಜಾಗೊಂಡಿದ್ದ ಫೆಮಾ (FEMA) ಮುಖ್ಯಸ್ಥರ ಮರುನೇಮಕ!

ಸ್ಯಾನ್ ಡಿಯಾಗೊ: ಅಮೆರಿಕದ ಫೆಡರಲ್ ಎಮರ್ಜೆನ್ಸಿ ಮ್ಯಾನೇಜೆಂಟ್ ಏಜೆನ್ಸಿ (FEMA) ಮುಖ್ಯಸ್ಥರಾಗಿ ಕ್ಯಾಮರೂನ್ ಹ್ಯಾಮಿಲ್ಟನ್ ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ. ಫೆಮಾ ಅಸ್ತಿತ್ವವನ್ನು ಸಮರ್ಥಿಸಿಕೊಂಡ ಕಾರಣಕ್ಕಾಗಿ ಕಳೆದ ವರ್ಷ ಇದೇ ಹುದ್ದೆಯಿಂದ ಕಿತ್ತುಹಾಕಲ್ಪಟ್ಟ ಮಾಜಿ ನೌಕಾಪಡೆ ಅಧಿಕಾರಿಯನ್ನು ಇದೀಗ ಮರು ನೇಮಕ ಮಾಡಿರುವುದು ಅಚ್ಚರಿ ಮೂಡಿಸಿದೆ.
ಫೆಮಾ ವಿಸರ್ಜನೆ ಮಾಡುವುದಾಗಿ ಟ್ರಂಪ್ ಆಡಳಿತ ನೀಡಿದ್ದ ಭರವಸೆಯಿಂದ ಹಿಂದೆ ಸರಿಯುವ ಕ್ರಮ ಎಂದು ಈ ಹೊಸ ನೇಮಕಾತಿಯನ್ನು ವಿಶ್ಲೇಷಿಸಲಾಗುತ್ತಿದೆ. ಈ ಏಜೆನ್ಸಿಯ ಅಸ್ತಿತ್ವದ ಬಗ್ಗೆ ಈ ಮೊದಲು ಟ್ರಂಪ್ ಬಹಿರಂಗವಾಗಿ ಟೀಕಿಸಿದ್ದರು. ಇದನ್ನು ವಿರೋಧಿಸಿದ ಹ್ಯಾಮಿಲ್ಟನ್, ಫೆಮಾ ರದ್ದುಪಡಿಸುವುದು ದೇಶದ ಹಿತಾಸಕ್ತಿಗೆ ಪೂರಕವಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಇದೀಗ ಹ್ಯಾಮಿಲ್ಟನ್ ನೇಮಕ ಸರ್ಕಾರದ ನಿಲುವಿನ ಬದಲಾವಣೆಯ ಸ್ಪಷ್ಟ ಸೂಚಕವಾಗಿದೆ.
ಈ ನೇಮಕಾತಿ ದೃಢಪಟ್ಟಲ್ಲಿ, ಹ್ಯಾಮಿಲ್ಟನ್ ಅವರು ತುರ್ತು ಸ್ಥಿತಿ ನಿರ್ವಹಣೆ ವಿಚಾರದಲ್ಲಿ ಟ್ರಂಪ್ ಮತ್ತು ದೇಶೀಯ ಭದ್ರತೆ ಕಾರ್ಯದರ್ಶಿ ಮಾರ್ಕ್ ವೇನ್ ಮುಲ್ಲಿನ್ ಅವರ ಪ್ರಧಾನ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಹಾಗೂ ಟ್ರಂಪ್ ಆಡಳಿತದ ಎರಡನೇ ಅವಧಿಯಲ್ಲಿ ಮೊಟ್ಟಮೊದಲ ಫೆಮಾ ಮುಖ್ಯಸ್ಥರಾಗಲಿದ್ದಾರೆ. ಈ ಏಜೆನ್ಸಿಗೆ ಈ ಮೊದಲು ಮೂವರು ಹಂಗಾಮಿ ಮುಖ್ಯಸ್ಥರು ನೇಮಕಗೊಂಡಿದ್ದು, 2025ರ ಜನವರಿಯಿಂದ ಮೇ ತಿಂಗಳವರೆಗೆ ಹ್ಯಾಮಿಲ್ಟನ್ ಈ ಹುದ್ದೆಯಲ್ಲಿದ್ದರು.
