ಕಾಂತಾರ’ ಸಿನಿಮಾ ವಿರುದ್ಧ ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ: ದೈವಾರಾಧನೆ ರಿಷಬ್ ಶೆಟ್ಟಿಯ ಸ್ವತ್ತಾಗಿದೆಯೇ

ಬೆಂಗಳೂರು: ‘ನಮ್ಮ ತಂದೆ ತಾಯಿ ಭೂತಗಳ ಆರಾಧನೆ ಮಾಡಿಕೊಂಡು, ಮಾಂಸಾಹಾರ ಸೇವಿಸಿಕೊಂಡು ನೆಮ್ಮದಿಯಿಂದ ಇದ್ದರು. ಈಗ ಆ ಭೂತಗಳು ಕಾಂತಾರ ಚಲನಚಿತ್ರದ ಮೂಲಕ ರಿಷಬ್ ಶೆಟ್ಟಿಯ ಸ್ವತ್ತಾಗಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ತುಳುನಾಡಿನ ದೈವಾರಾಧನೆ ಹಾಗೂ ‘ಕಾಂತಾರ’ ಸಿನಿಮಾವನ್ನು ಉಲ್ಲೇಖಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಚಿಂತಕ ಪುರುಷೋತ್ತಮ ಬಿಳಿಮಲೆ ನೀಡಿರುವ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪುರುಷೋತ್ತಮ ಬಿಳಿಮಲೆ, “ನಮ್ಮ ತಂದೆ-ತಾಯಿ ಭೂತಗಳ ಆರಾಧನೆ ಮಾಡಿಕೊಂಡು, ಮಾಂಸಾಹಾರ ಸೇವಿಸಿಕೊಂಡು ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಈಗ ಆ ಭೂತಗಳು ‘ಕಾಂತಾರ’ ಸಿನಿಮಾದ ಮೂಲಕ ರಿಷಬ್ ಶೆಟ್ಟಿಯವರ ಸ್ವತ್ತಾಗಿವೆ” ಎಂದು ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ.
ಪುರುಷೋತ್ತಮ ಬಿಳಿಮಲೆ ಅವರ ಪ್ರಕಾರ, ತುಳುನಾಡಿನ ದೈವಾರಾಧನೆ ಶತಮಾನಗಳಿಂದ ಸ್ಥಳೀಯ ಜನರ ನಂಬಿಕೆ, ಸಂಸ್ಕೃತಿ ಮತ್ತು ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ. ಆದರೆ ‘ಕಾಂತಾರ’ ಚಿತ್ರದ ಭಾರೀ ಯಶಸ್ಸಿನ ನಂತರ ಈ ಸಂಪ್ರದಾಯವನ್ನು ಕೇವಲ ಸಿನಿಮಾದೊಂದಿಗೆ ಗುರುತಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಅದು ಮೂಲ ಸಂಸ್ಕೃತಿಯ ಅಸ್ತಿತ್ವಕ್ಕೆ ಧಕ್ಕೆ ತರುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.