ಪುಣೆ ಅತ್ಯಾಚಾ*ರ ಪ್ರಕರಣ: ರಾಜಕಾರಣಿಗಳ ಭೇಟಿಗೆ ಸಂತ್ರಸ್ತ ತಂದೆ ನಕಾರ.

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋರ್ ತಾಲ್ಲೂಕಿನ ನಾಪುರ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಂತ್ರಸ್ತೆಯ ತಂದೆ ರಾಜಕಾರಣಿಗಳಿಗೆ ವಿನಮ್ರ ಮನವಿ ಮಾಡಿದ್ದಾರೆ.
ರಾಜಕಾರಣಿಗಳ ಸಂತಾಪ ಸಂದೇಶಗಳನ್ನು ತಿರಸ್ಕರಿಸಿದ ಅವರು, “ನನ್ನ ಮಗಳಿಗೆ ನ್ಯಾಯ ಸಿಗುವವರೆಗೆ ಮತ್ತು ಅಪರಾಧಿಗೆ ಮರಣದಂಡನೆ ವಿಧಿಸುವವರೆಗೆ ಯಾವುದೇ ರಾಜಕಾರಣಿಯೂ ನಮ್ಮ ಮನೆಗೆ ಬರಬಾರದು” ಎಂದು ಹೇಳಿದ್ದಾರೆ.
“ನಮ್ಮ ಕುಟುಂಬದೊಂದೇ ಒಂದು ವಿನಂತಿ ಇದೆ. ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ಬಳಿಕ ಮಾತ್ರ ನಾವು ರಾಜಕೀಯ ನಾಯಕರು ಅಥವಾ ಯಾರನ್ನಾದರೂ ಭೇಟಿ ಮಾಡುತ್ತೇವೆ. ಅಲ್ಲಿಯವರೆಗೆ ಯಾರೂ ನಮ್ಮ ಮನೆಗೆ ಸಂತಾಪ ಸೂಚಿಸಲು ಬರಬಾರದು,” ಎಂದು ಅವರು ಸ್ಪಷ್ಟಪಡಿಸಿದರು.

ಈ ಘಟನೆಯಿಂದ ಆಕ್ರೋಶಗೊಂಡ ನೂರಾರು ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಧಾವಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆಗಳ ಬಳಿಕ ಸರಕಾರವು ಪ್ರಕರಣವನ್ನು ತ್ವರಿತ ವಿಚಾರಣೆಗೆ ಒಳಪಡಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಅವರ ಮನವಿಯ ಹೊರತಾಗಿಯೂ, ರಾಜಕೀಯ ನಾಯಕರು ಅವರನ್ನು ಸಂಪರ್ಕಿಸಲು ಯತ್ನಿಸುವುದನ್ನು ಮುಂದುವರಿಸಿದ್ದಾರೆ. ಶಾಸಕ ರೋಹಿತ್ ಪವಾರ್ ಹಾಗೂ ಸಂಸದೆ ಮೇಧಾ ಕುಲಕರ್ಣಿ ಸಂತ್ರಸ್ತ ಬಾಲಕಿಯ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದು, ಬಳಿಕ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಕೂಡ ಕುಟುಂಬವನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ನಡುವೆ, ಎನ್‌ಸಿಪಿ (ಎಸ್‌ಪಿ) ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರು ‘ಶಕ್ತಿ ಕಾಯ್ದೆ’ಯನ್ನು ತಕ್ಷಣ ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ “ಕಾನೂನಿನ ಭಯ ಅಸ್ತಿತ್ವದಲ್ಲಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರಕರಣವನ್ನು ತ್ವರಿತ ವಿಚಾರಣಗೊಳಪಡಿಸಿ ದಾಖಲೆಯ ಸಮಯದಲ್ಲಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. “ಸಂತ್ರಸ್ತೆಯ ತಂದೆಯೊಂದಿಗೆ ನಾನು ಎರಡು ಬಾರಿ ಮಾತನಾಡಿದ್ದೇನೆ. ಆರೋಪಿಗೆ ಮರಣದಂಡನೆ ವಿಧಿಸಲು ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬಕ್ಕೆ ಸರ್ಕಾರದಿಂದ ಬೆಂಬಲ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ 65 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ. ಕೂಲಿ ಕೆಲಸ ಮಾಡುತ್ತಿದ್ದ ಆತ, ಆಹಾರದ ಆಮಿಷ ನೀಡಿ ಬಾಲಕಿಯನ್ನು ದನಗಳ ಹಟ್ಟಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ, ಬಳಿಕ ಗುರುತು ಮರೆಮಾಡಲು ಕಲ್ಲಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.