-ವಿದ್ಯುತ್ ತಂತಿ ಬೇಲಿ ಹಾಕಿ ವನ್ಯಜೀವಿ ಬೇಟೆಗೆ ಸಂಚು; ಇಬ್ಬರು ಶಂಕಿತ ಖದೀಮರ ಬಂಧನ!

ಚಿಂಚೋಳಿ : ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಿ ವನ್ಯಜೀವಿಗಳ ಬೇಟೆಗೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಹಾಗೂ ಜೆಸ್ಕಾಂ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ತಾಲೂಕಿನ ಕುಂಚಾವರಂ ಅರಣ್ಯ ವಲಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಂಗಾಪೂರ ಗ್ರಾಮದ ಮಾಣಿಕ ಹರಿಶ್ಚಂದ್ರ ಪವಾರ (40) ಹಾಗೂ ಸುನೀಲ ಧರ್ಮು ರಾಠೋಡ (30) ಬಂಧಿತರಾಗಿದ್ದಾರೆ.
ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ಸಂಗಾಪೂರ ಅರಣ್ಯ ಪ್ರದೇಶದ ಸರ್ವೇ ನಂ. 3ರಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಆರೋಪಿಗಳು ಸುಮಾರು ಎರಡು ಕಿಲೋಮೀಟರ್ ಉದ್ದದ ಜಿಐ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವುದನ್ನು ಪತ್ತೆಹಚ್ಚಿದರು.

ವನ್ಯಜೀವಿಗಳನ್ನು ಬೇಟೆಯಾಡುವ ಉದ್ದೇಶದಿಂದ ಈ ಮಾರಕ ಬಲೆ ನಿರ್ಮಿಸಲಾಗಿತ್ತು ಎಂದು ಕುಂಚಾವರಂ ವಲಯ ಅರಣ್ಯಾಧಿಕಾರಿ ಸಂಜೀವ ಕುಮಾರ ಚವ್ಹಾಣ ತಿಳಿಸಿದ್ದಾರೆ.
ವಿದ್ಯುತ್ ತಂತಿಗೆ ಸಿಲುಕಿ ಒಂದು ಮೊಲ ಹಾಗೂ ಎರಡು ಟಿಟ್ಟಿಭ (ಲ್ಯಾಪ್ವಿಂಗ್ ಪಕ್ಷಿಗಳು ಸಾವನ್ನಪ್ಪಿರುವುದು ಸ್ಥಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ದಾಳಿ ವೇಳೆ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ ಅಧಿಕಾರಿಗಳು, ಮೃತ ವನ್ಯಜೀವಿಗಳು ಹಾಗೂ ಬೇಟೆಗೆ ಬಳಸಿದ್ದ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.
ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶಿಸಿ ವಿದ್ಯುತ್ ಪ್ರವಹಿಸಿ ವನ್ಯಜೀವಿಗಳ ಬೇಟೆಯಾಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಗಂಭೀರ ಅಪರಾಧವಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸ್ಥಳ ಮಹಜರು ಪೂರ್ಣಗೊಳಿಸಿದ ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕುಂಚಾವರಂ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಜೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅಧಿಕಾರಿಗಳ ಸಮಯಪ್ರಜ್ಞೆ ಹಾಗೂ ಜಂಟಿ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.