ಪಾಲಕ್ಕಾಡ್: ಕಲ್ಲಂಗಡಿ ಹಣ್ಣಿನ ಕೆಳಗೆ ಸ್ಫೋಟಕ ಸಾಗಾಟ; 100 ಬಾಕ್ಸ್ಗಳ ಜಪ್ತಿ!

ತಿರುವನಂತಪುರಂ: ಕೇರಳದ ಪಾಲಕ್ಕಾಡ್ (Palakkad) ಜಿಲ್ಲೆಯಲ್ಲಿ ಬೆಚ್ಚಿಬೀಳುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ವೈದ್ಯಕೀಯ ಕಾಲೇಜು ಬಳಿಯ ವ್ಯಾನ್ನಿಂದ ಜಿಲೆಟಿನ್ ಕಡ್ಡಿಗಳು (Gelatin Sticks) ಸೇರಿದಂತೆ ಸ್ಫೋಟಕ ತುಂಬಿದ 100ಕ್ಕೂ ಹೆಚ್ಚು ಬಾಕ್ಸ್ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.

ಸ್ಫೋಟಕ ತಿಂಬಿದ ಪೆಟ್ಟಿಗೆಗಳನ್ನ ಪಿಕಪ್ ವಾಹನದಲ್ಲಿ ರಹಸ್ಯವಾಗಿ ಸಾಗಿಸಲಾಗುತ್ತಿತ್ತು. ಆದ್ರೆ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಸಿಕ್ಕಿಬಿದ್ದಿದ್ದು, ಇಡೀ ಕೇರಳದಾದ್ಯಂತ ಕಳವಳಕ್ಕೆ ಕಾರಣವಾಗಿದೆ.

ಪಾಲಕ್ಕಾಡ್ ಟೌನ್ ಸೌತ್ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ, ಪಾಲಕ್ಕಾಡ್ ವೈದ್ಯಕೀಯ ಕಾಲೇಜು (Palakkad Medical College) ಬಳಿ ವಾಹನದಿಂದ 100 ಕ್ಕೂ ಹೆಚ್ಚು ಬಾಕ್ಸ್ ಜೆಲೆಟಿನ್ ಕಡ್ಡಿಗಳು ಮತ್ತು ಡಿಟೋನೇಟರ್ ತುಂಬಿದ 20 ಕ್ಕೂ ಹೆಚ್ಚು ಬಾಕ್ಸ್ಗಳು ಪತ್ತೆಯಾಗಿವೆ. ಭಾರೀ ಪ್ರಮಾಣದ ಕಲ್ಲಂಗಡಿ ಹಣ್ಣುಗಳನ್ನಿಟ್ಟು ಕೆಳಗೆ ಸ್ಫೋಟಕಗಳನ್ನ ಇಟ್ಟು ಸಾಗಿಸಲಾಗುತ್ತಿತ್ತು. ರಾಜ್ಯಕ್ಕೆ ಹೆಚ್ಚಿನ ಪ್ರಮಾಣದ ಸ್ಫೋಟಕಗಳನ್ನ ತರಲಾಗುತ್ತಿದೆ ಅನ್ನೋ ಬಗ್ಗೆ ಮೊದಲೇ ಮಾಹಿತಿ ಬಂದಿದ್ದರಿಂದ ನಾವು ಕೂಡ ಅಲರ್ಟ್ ಆಗಿದ್ದು, ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಡ್ರೈವರ್ ಅರೆಸ್ಟ್
ಘಟನೆ ಬಳಿಕ ಪಿಕಪ್ ವ್ಯಾನ್ನ ಚಾಲಕ ಸಂತಿಲ್ ಎಂಬಾತನನ್ನ ಬಂಧಿಸಲಾಗಿದೆ. ಪ್ರಾಥಮಿಕ ವಿಚಾರಣೆ ವೇಳೆ, ಅವರು ತಮಿಳುನಾಡಿನ ಕೊಯಮತ್ತೂರಿನಿಂದ ಸ್ಫೋಟಕ ತುಂಬಿದ ಪೆಟ್ಟಿಗೆಗಳನ್ನ ಲೋಡ್ ಮಾಡಲಾಗಿತ್ತು. ತ್ರಿಶೂರ್ನಲ್ಲಿರುವ ಕ್ವಾರಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ವಾಹನ ತಪಾಸಣೆ ಸಮಯದಲ್ಲಿ ಚಾಲಕ ವ್ಯಾನ್ ನಿಲ್ಲಿಸಿದೇ ಮುಂದೆ ಸಾಗಿದ್ದ, ಹೀಗಾಗಿ ಬೆನ್ನಟ್ಟಿ ಬಂಧಿಸಲಾಯಿತು.

ಕಲ್ಲುಗಣಿಗಾರಿಕೆಗೆ ಬಳಸಲು ಸಾಗಾಟ
ಕಪ್ಪು ಶಿಲೆಯ ಕಲ್ಲುಗಣಿ ಕಾರ್ಯಾಚರಣೆಗಳಿಗೆ ಬಳಸಲು ಸ್ಫೋಟಕಗಳನ್ನ ರಹಸ್ಯವಾಗಿ ಸಾಗಿಸಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಹಿಂದೆಯೂ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಸ್ಫೋಟಕ ವಸ್ತುಗಳ ಕಾಯ್ದೆಯಡಿಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.