ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಐತಿಹಾಸಿಕ ಆದೇಶ; ವಿಚಾರಣೆ ಮುಗಿದ 24 ಗಂಟೆಯೊಳಗೆ ಜಾಮೀನು ಅರ್ಜಿ ಇತ್ಯರ್ಥಕ್ಕೆ ಕಡ್ಡಾಯ ನಿರ್ದೇಶನ!

ಹೊಸದಿಲ್ಲಿ: ದೇಶದ ಎಲ್ಲಾ ಹೈಕೋರ್ಟ್ಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ನಿರ್ದೇಶನವನ್ನು ಹೊರಡಿಸಿದೆ. ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡ ದಿನ ಅಥವಾ ಗರಿಷ್ಠ 24 ಗಂಟೆಯೊಳಗೆ ಇತ್ಯರ್ಥಪಡಿಸಬೇಕು ಎಂದು ಆದೇಶಿಸಿದೆ.
“ವಿಚಾರಣೆ ಪೂರ್ಣಗೊಂಡು ಆದೇಶ ಕಾಯ್ದಿರಿಸಿದ ಬಳಿಕ ಮೂರು ತಿಂಗಳೊಳಗೆ ತೀರ್ಪು ಪ್ರಕಟಿಸಬೇಕು” ಎಂದು ಸೂಚಿಸಿರುವ ಸುಪ್ರೀಂ ಕೋರ್ಟ್, ಈ ನಿರ್ದೇಶನಗಳನ್ನು ದೇಶದ ಎಲ್ಲಾ ಹೈಕೋರ್ಟ್ಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್ಕಲ್ಯ ಬಾಗಿ ಅವರನ್ನೊಳಗೊಂಡ ಪೀಠವು ನ್ಯಾಯಾಂಗ ಪ್ರಕ್ರಿಯೆಯಲ್ಲಿನ ವಿಳಂಬಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಮಹತ್ವದ ನಿರ್ದೇಶನವನ್ನು ನೀಡಿದೆ.

ವೈಯಕ್ತಿಕ ಸ್ವಾತಂತ್ರ್ಯ ಮತ್ತು ತ್ವರಿತ ನ್ಯಾಯದ ಮೇಲೆ ಪರಿಣಾಮ ಬೀರುತ್ತಿರುವ ನ್ಯಾಯಾಂಗ ವಿಳಂಬವನ್ನು ತಡೆಗಟ್ಟುವ ಉದ್ದೇಶದಿಂದ ಐತಿಹಾಸಿಕ ಕ್ರಮವಾಗಿ ನ್ಯಾಯಾಂಗದ ಕಾರ್ಯವೈಖರಿಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಕಾಲಮಿತಿಯನ್ನು ಸಾಂಸ್ಥಿಕಗೊಳಿಸಲು ಸಮಗ್ರ ಚೌಕಟ್ಟನ್ನು ಸುಪ್ರೀಂ ಕೋರ್ಟ್ ರೂಪಿಸಿದೆ.
“ಈ ಮಾರ್ಗಸೂಚಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ. ದೇಶದ ಎಲ್ಲಾ ಹೈಕೋರ್ಟ್ಗಳ ರಿಜಿಸ್ಟ್ರಾರ್ ಜನರಲ್ಗಳು ಈ ಚೌಕಟ್ಟನ್ನು ತಮ್ಮ ತಮ್ಮ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸಿ, ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಿರ್ದೇಶನ ನೀಡಿದ್ದಾರೆ.