Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮುಂಬೈ: ಬಾಂದ್ರಾ ಗರೀಬ್ ನಗರದಲ್ಲಿ ರೈಲ್ವೆ ಇಲಾಖೆಯ ಭಾರಿ ಕಾರ್ಯಾಚರಣೆ; 400ಕ್ಕೂ ಹೆಚ್ಚು ಮನೆಗಳು ನೆಲಸಮ

Spread the love

ಮುಂಬೈ: ಬಾಂದ್ರಾ ಪೂರ್ವದಲ್ಲಿನ ಗರೀಬ್ ನಗರ ಕೊಳೆಗೇರಿ ಪ್ರದೇಶದಲ್ಲಿ ಪಶ್ಚಿಮ ರೈಲ್ವೆ ನಡೆಸಿದ ಭಾರಿ ತೆರವು ಕಾರ್ಯಾಚರಣೆ ಅಭಿವೃದ್ಧಿ ಮತ್ತು ಮಾನವೀಯತೆ ನಡುವಿನ ಚರ್ಚೆಗೆ ಕಾರಣವಾಗಿದೆ. ನ್ಯಾಯಾಲಯದ ಬೆಂಬಲದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ 400ಕ್ಕೂ ಹೆಚ್ಚು ಅನಧಿಕೃತ ಮನೆಗಳು ಮತ್ತು ಅಂಗಡಿಗಳನ್ನು ನೆಲಸಮಗೊಳಿಸಲಾಗಿದ್ದು, ಸಾವಿರಾರು ಜನರು ಮಳೆಗಾಲದ ಮುನ್ನವೇ ನಿರಾಶ್ರಿತರಾಗಿದ್ದಾರೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಬಾಂದ್ರಾ ನಿಲ್ದಾಣದ ಪೂರ್ವ ಭಾಗದಲ್ಲಿ ರೈಲ್ವೆ ಹಳಿಗಳಿಗೆ ಅಂಟಿಕೊಂಡು ನಿರ್ಮಾಣವಾಗಿದ್ದ ಕಟ್ಟಡಗಳು ಸುರಕ್ಷತೆಗೆ ಗಂಭೀರ ಅಪಾಯವಾಗಿದ್ದವು. ಹೊಸ ರೈಲು ಮಾರ್ಗಗಳ ನಿರ್ಮಾಣ, ಬಾಂದ್ರಾ ಟರ್ಮಿನಸ್ ಮತ್ತು ಉಪನಗರ ನಿಲ್ದಾಣಗಳ ನಡುವಿನ ಸಂಪರ್ಕ ಸುಧಾರಣೆ ಹಾಗೂ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಸಂಪರ್ಕ ವಿಸ್ತರಣೆಗೆ ಈ ಭೂಮಿ ಅಗತ್ಯವಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 5,200ರಿಂದ 5,300 ಚದರ ಮೀಟರ್ ಪ್ರದೇಶವನ್ನು ತೆರವುಗೊಳಿಸಲಾಗಿದೆ. ದಶಕಗಳಿಂದ ಅತಿಕ್ರಮಣಕ್ಕೊಳಗಾಗಿದ್ದ ಈ ಭೂಮಿಯ ಅಂದಾಜು ಮೌಲ್ಯ 600 ಕೋಟಿ ರೂಪಾಯಿಯಷ್ಟಿದೆ.

ಈ ಕಾರ್ಯಾಚರಣೆಗೆ ಬಾಂಬೆ ಹೈಕೋರ್ಟ್ ಬೆಂಬಲ ನೀಡಿದ್ದರೂ, ಕಾರ್ಯಾಚರಣೆಯ ಸಮಯದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ನೈಋತ್ಯ ಮುಂಗಾರು ಕೆಲವೇ ದಿನಗಳಲ್ಲಿ ಮುಂಬೈ ತಲುಪಲಿರುವ ಹಿನ್ನೆಲೆಯಲ್ಲಿ ಸಾವಿರಾರು ಕುಟುಂಬಗಳು ಆಶ್ರಯ ಕಳೆದುಕೊಂಡಿವೆ. ಹಲವರಿಗೆ ತಮ್ಮ ಮನೆಯ ವಸ್ತುಗಳನ್ನು ಸುರಕ್ಷಿತವಾಗಿ ಹೊರತೆಗೆದುಕೊಳ್ಳಲು ಕೂಡ ಸಮಯ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ರಸ್ತೆ ಬದಿಯಲ್ಲಿ ತಮ್ಮ ಸಾಮಾನುಗಳೊಂದಿಗೆ ಕುಳಿತಿರುವ ದೃಶ್ಯಗಳು ಕಂಡುಬಂದಿವೆ.

ಬಾಂದ್ರಾ ಪೂರ್ವದಿಂದ ಪ್ರತಿದಿನ ಸಂಚರಿಸುವ ಸಾಸ್ಟೇರ್ ಎಂಜಿನಿಯರ್ ದೇವೇಶ್ ಕಾಂಬ್ಳೆ “ಆ ಪ್ರದೇಶದಲ್ಲಿ ಅಸ್ವಚ್ಛತೆ, ಅಪರಾಧ ಹಾಗೂ ಮಾದಕ ವ್ಯಸನಿಗಳ ಹಾವಳಿ ಸಾಮಾನ್ಯವಾಗಿತ್ತು. ಆದರೆ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯರು ತಮ್ಮ ಮನೆಗಳು ಧ್ವಂಸವಾದ ಬಳಿಕ ರಸ್ತೆ ಬದಿಯಲ್ಲಿ ಕುಳಿತಿರುವ ದೃಶ್ಯ ಮನಕಲಕುವಂತಿದೆ,” ಎಂದು ಹೇಳಿದ್ದಾರೆ.
ಗರೀಬ್ ನಗರವು ಮುಂಬೈನ ಅತ್ಯಂತ ಹಳೆಯ ಹಾಗೂ ದಟ್ಟ ಕೊಳೆಗೇರಿ ಪ್ರದೇಶಗಳಲ್ಲಿ ಒಂದಾಗಿತ್ತು. ಎರಡು ಮತ್ತು ಮೂರು ಅಂತಸ್ತಿನ ಕಟ್ಟಡಗಳೂ ಇಲ್ಲಿ ನಿರ್ಮಾಣವಾಗಿದ್ದವು. ಅನೇಕ ಕುಟುಂಬಗಳು 40 ವರ್ಷಕ್ಕೂ ಹೆಚ್ಚು ಕಾಲ ಇಲ್ಲಿ ವಾಸಿಸುತ್ತಿದ್ದವು. ದಿನಗೂಲಿ ಕಾರ್ಮಿಕರು, ಸೇವಾ ವಲಯದ ಸಿಬ್ಬಂದಿ ಮತ್ತು ನಗರದ ಅನಿವಾರ್ಯ ಕಾರ್ಮಿಕ ವರ್ಗಕ್ಕೆ ಈ ಪ್ರದೇಶ ಆಶ್ರಯವಾಗಿತ್ತು. ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಸಿರಾಜ್ ನೂರಾನಿ, “ಕುಟುಂಬಗಳು ತಮ್ಮ ಮನೆಗಳು ಕುಸಿಯುತ್ತಿರುವುದನ್ನು ಕಣ್ಣಾರೆ ನೋಡುತ್ತಾ ತೆರೆಯಾದ ಜಾಗದಲ್ಲಿ ಕುಳಿತಿದ್ದವು,” ಎಂದು ಸಾಮಾಜಿಕ ಜಾಲತಾಣ Xನಲ್ಲಿ ಬರೆದಿದ್ದಾರೆ.

ಮಂಗಳವಾರ ಆರಂಭವಾದ ಕಾರ್ಯಾಚರಣೆಯಲ್ಲಿ ಭಾರೀ ಬುಲ್ಲೋಝರ್ ಗಳು ಮತ್ತು ಮಣ್ಣು ತೆಗೆಯುವ ಯಂತ್ರಗಳನ್ನು ಬಳಸಲಾಗಿದ್ದು, ಕೇವಲ 48 ಗಂಟೆಗಳಲ್ಲಿ 60% ಕ್ಕೂ ಹೆಚ್ಚು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಎಸ್ಟಿಒಗಳು ಆಹಾರ ಮತ್ತು ಅಗತ್ಯ ನೆರವು ವಿತರಿಸುತ್ತಿದ್ದರೂ, ಅನೇಕ ಕುಟುಂಬಗಳು ತಾತ್ಕಾಲಿಕ ಆಶ್ರಯವಿಲ್ಲದೆ ಸಂಕಷ್ಟದಲ್ಲಿವೆ. “ಕಾನೂನುಬಾಹಿರವಾಗಿರಲಿ ಅಥವಾ ಕಾನೂನುಬದ್ಧವಾಗಿರಲಿ, ಅವರು ಮಾನವರೇ,” ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕೆಲವು ಕುಟುಂಬಗಳಿಗೆ ಈದ್ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲೇ ಈ ಕಾರ್ಯಾಚರಣೆ ನಡೆದಿರುವುದೂ ಟೀಕೆಗೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಇನ್ನೊಂದೆಡೆ, ಸ್ಥಳೀಯ ಪ್ರಯಾಣಿಕರು ಮತ್ತು ಕೆಲ ನಾಗರಿಕರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. “ಅತಿಕ್ರಮಣಗಳ ಕಾರಣದಿಂದ ಬೆಸ್ಟ್ ಬನ್ಗಳ ಸಂಚಾರಕ್ಕೂ ತೊಂದರೆ ಉಂಟಾಗಿತ್ತು. ಆ ಪ್ರದೇಶದಲ್ಲಿ ಸಂಚರಿಸುವುದು ಅಸುರಕ್ಷಿತವಾಗಿತ್ತು” ಎಂದು ಒಬ್ಬರು ರೆಡ್ಡಿಟ್ನಲ್ಲಿ ಬರೆದಿದ್ದಾರೆ. ಮತ್ತೊಬ್ಬರು, “ಇದು ವರ್ಷಗಳಿಂದ ಬಾಕಿ ಇದ್ದ ತೆರವು ಕಾರ್ಯಾಚರಣೆ. ಕೊನೆಗೂ ನ್ಯಾಯಾಲಯ ಅನುಮತಿ ನೀಡಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಾಚರಣೆಯ ವೇಳೆ ಕಲ್ಲು ತೂರಾಟ ನಡೆದಿದ್ದು, ಕನಿಷ್ಠ 10 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಮಾಜವಿರೋಧಿ ಚಟುವಟಿಕೆಗಳು ಈ ಪ್ರದೇಶದಲ್ಲಿ ಹೆಚ್ಚಾಗಿದ್ದವು ಎಂಬ ಆರೋಪಗಳೂ ಕೇಳಿಬಂದಿವೆ.
ಈ ಘಟನೆಯೊಂದಿಗೆ ದಿವಂಗತ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಸುನಿಲ್ ದತ್ ಅವರನ್ನು ಹಲವರು ನೆನಪಿಸಿಕೊಂಡಿದ್ದಾರೆ. ಹಿಂದೆ ಇದೇ ಪ್ರದೇಶದಲ್ಲಿ ನಡೆದ ತೆರವು ಕಾರ್ಯಾಚರಣೆಯನ್ನು ತಡೆಯಲು ಅವರು ಬುಲ್ಲೋಜರ್ ಮುಂದೆ ಮಲಗಿದ್ದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ಕೆಲ ಮಹಿಳೆಯರು ಬಿಜೆಪಿ ಸರ್ಕಾರ “ಗರೀಬಿ” ಬದಲು “ಗರೀಬ್” ಅನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಮರು ಅತಿಕ್ರಮಣವಾಗದಂತೆ ತೆರವುಗೊಳಿಸಿದ ಪ್ರದೇಶಕ್ಕೆ ಬೇಲಿ ಹಾಕಲು ಪಶ್ಚಿಮ ರೈಲ್ವೆ ಯೋಜಿಸಿದೆ. 2021ರ ಸಮೀಕ್ಷೆಯ ಪ್ರಕಾರ ಅರ್ಹತೆ ಹೊಂದಿರುವ ಸುಮಾರು 100 ಕುಟುಂಬಗಳಿಗೆ ಪುನರ್ವಸತಿ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯಿಂದ 50ಕ್ಕೂ ಹೆಚ್ಚು ರೈಲು ಸೇವೆಗಳಿಗೆ ಅನುಕೂಲವಾಗಲಿದ್ದು, ಉಪನಗರ ಮಾರ್ಗಗಳಲ್ಲಿ ದಟ್ಟಣೆ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *