ಗುಜರಾತ್ ವಿರುದ್ಧ ಮುಂಬೈ ಅಬ್ಬರ: ತಿಲಕ್ ವರ್ಮಾ ಸಿಡಿಲಬ್ಬರದ ಶತಕ; ವಿಕೆಟ್ ಖಾತೆ ತೆರೆದ ಜಸ್ಪ್ರೀತ್ ಬೂಮ್ರಾ

ಅಹ್ಮದಾಬಾದ್: ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬೌಲರ್ ಜಸ್ಟೀತ್ ಬೂಮ್ರಾ ಕೊನೆಗೂ ಪ್ರಸಕ್ತ ಐಪಿಎಲ್‌ನಲ್ಲಿ ವಿಕೆಟ್ ಖಾತೆ ತೆರೆದಿದ್ದಾರೆ. ಐದು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಪಡೆಯದ ಬೂಮ್ರಾ, ಆರನೇ ಪಂದ್ಯದ ಮೊದಲ ಎಸೆತದಲ್ಲೇ ಗುಜರಾತ್ ಟೈಟನ್ಸ್ ತಂಡದ ಅಪಾಯಕಾರಿ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಅವರ ವಿಕೆಟ್ ಕಿತ್ತರು. ಮೊದಲ ಓವರ್‌ನಲ್ಲಿ ಕೇವಲ ಒಂದು ರನ್ ನೀಡಿದ ಬೂಮ್ರಾ, ಅಂತಿಮವಾಗಿ 3 ಓವರ್‌ಗಳಲ್ಲಿ 15 ರನ್ ನೀಡಿ ಒಂದು ವಿಕೆಟ್ ಪಡೆದರು.
ಗುಜರಾತ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಬೂಮ್ರಾ ವಿಕೆಟ್ ಪಡೆದ ಬಗ್ಗೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಕೇಳಿದಾಗ, “ಹೌದು; ಇದು ಅದ್ಭುತ ಜಸ್ಟೀತ್ ಬೂಮ್ರಾ ಏಕೆ ಮೊದಲ ಓವರ್ ಬೌಲಿಂಗ್ ಮಾಡುತ್ತಿಲ್ಲ ಎಂದು ಹಲವರು ಕೇಳುತ್ತಾರೆ. ಆದರೆ 151 ಇನ್ನಿಂಗ್ಸ್‌ಗಳಲ್ಲಿ ಅವರು ಎಂಟು ಅಥವಾ ಒಂಬತ್ತು ಬಾರಿ ಮಾತ್ರ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ. ಆದ್ದರಿಂದ ನನ್ನ ಪ್ರಕಾರ ಇದು ಹಾರ್ದಿಕ್ ಪಾಂಡ್ಯ ಸಮಸ್ಯೆಯಲ್ಲ ಜಸ್ಟೀತ್ ಬೂಮ್ರಾ ಎಷ್ಟು ವಿಶೇಷ ಬೌಲರ್ ಎಂದರೆ, ತಂಡಕ್ಕೆ ಅಗತ್ಯವಿದ್ದಾಗ ಅವರನ್ನು ಬಳಸಿಕೊಳ್ಳಬಹುದು. ಅದು ಆರಂಭದಲ್ಲೇ ಆಗಬೇಕಿಲ್ಲ’ ಎಂದು ಸಮರ್ಥಿಸಿಕೊಂಡರು.

‘ಇಂದು ಮಾತ್ರ ಹೊಸ ಚಂಡಿನಲ್ಲಿ ನಾವು ಪರಿಣಾಮಕಾರಿಯಾಗಿ ಇರಬೇಕು ಎನ್ನುವುದು ಮನವರಿಕೆಯಾಗಿದೆ. ಅವರಿಂತ ಉತ್ತಮ ಯಾರೂ ಇಲ್ಲ’ ಎಂದು ವಿಶ್ಲೇಷಿಸಿದರು.
ನಾಲ್ಕು ಪಂದ್ಯಗಳ ಸೋಲಿನ ಸರಣಿ ಕಳಚಿಕೊಂಡ ಬಗ್ಗೆ ಪಾಂಡ್ಯ ಸಮಾಧಾನ ವ್ಯಕ್ತಪಡಿಸಿದರು. ಇದು ಅತ್ಯಂತ ಮಹತ್ವದ್ದು ಹೊರಗೆ ಹೋಗಿ ಗೆಲ್ಲುವುದು ಸದಾ ಸವಾಲು. ಜೊತೆಗೆ ಅಹ್ಮದಾಬಾದ್ ಮೈದಾನ ಮುಂಬೈಗೆ ಬೇಟೆಯ ಮೈದಾನವಲ್ಲ; ಆದ್ದರಿಂದ ಇದು ಹೆಚ್ಚಿನ ಸಮಾಧಾನ ತಂದಿದೆ” ಎಂದು ಹೇಳಿದರು.
ಕೇವಲ 45 ಎಸೆತಗಳಲ್ಲಿ ತಿಲಕ್ ವರ್ಮಾ ಅಜೇಯ 101 ರನ್ ಸಿಡಿಸುವ ಮೂಲಕ ಮುಂಬೈ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಈ ಪಂದ್ಯದಲ್ಲಿ ತಿಲಕ್ ವರ್ಮಾ ಫ್ರಾಂಚೈಸಿ ಹರ ವೇಗದ ಐಪಿಎಲ್ ಶತಕದ ದಾಖಲೆಯನ್ನು ಸರಿಗಟ್ಟಿದರು. ನಮನ್ ಧೀರ್ (45) ಅವರಿಗೆ ಬೆಂಬಲವಾಗಿ ನಿಂತು ಆರಂಭಿಕ ಆಘಾತದಿಂದ ಮುಂಬೈ ಚೇತರಿಸಿಕೊಳ್ಳಲು ಸಾಥ್ ನೀಡಿದರು. ಗುಜರಾತ್ ತಂಡ ಕೇವಲ 100 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರಿ ಅಂತರದ ಸೋಲು ಕಂಡಿತು.