ಕಣ್ಣೀರು ನುಂಗಿ ಕಣಕ್ಕಿಳಿದ ಮುಕೇಶ್ ಚೌಧರಿ: ವಿಕೆಟ್ ಪಡೆದು ಅಗಲಿದ ತಾಯಿಗೆ ಅರ್ಪಿಸಿದ ಭಾವುಕ ಕ್ಷಣ

ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ತಂಡದ ಕ್ವಿಂಟನ್ ಡಿ ಕಾಕ್ ಅವರ ಸ್ಟಂಪ್ ಚದುರಿಸಿದಾಗ ಮುಕೇಶ್ ಚೌಧರಿ ಅವರ ಮುಖದಲ್ಲಿ ಎಂದಿನ ಲವಲವಿಕೆ ಇರಲಿಲ್ಲ; ಗಾಳಿಯಲ್ಲಿ ತೇಲಾಡುವ ಸಂಭ್ರಮವೂ ಕಂಡುಬರಲಿಲ್ಲ. ಬದಲಾಗಿ ಮೈದಾನದ ಮಧ್ಯಭಾಗದಲ್ಲಿ ಆಗಸದತ್ತ ನೋಡಿ ಬೆರಳು ಮೇಲಕ್ಕೆತ್ತಿ ತಣ್ಣಗೆ, “ಮಾ ಯೇ ತೇರೆ ಲಿಯೇ ಹೈ” ಎಂಬ ಪಿಸುಧ್ವನಿ ಕೇಳಿಬಂತು.
ಇದು ವೈಯಕ್ತಿಕ ನೋವಿನ ನಡುವೆಯೂ ಆಡುತ್ತಿದ್ದ ಮಗ ತಾಯಿಗೆ ಸಲ್ಲಿಸಿದ ಶ್ರದ್ಧಾಂಜಲಿ. ರಾಜಸ್ಥಾನದ ಭಿಲ್ವಾರದಲ್ಲಿ ತಾಯಿಯ ಅಂತ್ಯಕ್ರಿಯೆ ಮುಗಿಸಿ ನೇರವಾಗಿ ಬಂದು ಮರುದಿನವೇ ತಂಡ ಸೇರಿಕೊಂಡ ಆಟಗಾರ ವೃತ್ತಿಪ್ರೇಮ ಮೆರೆದರು.
ಮುಕೇಶ್ ಅವರ ತಾಯಿ ದೀರ್ಘಕಾಲದ ಅಸ್ವಸ್ಥತೆಯ ಬಳಿಕ ಮಂಗಳವಾರ ಕೊನೆಯುಸಿರೆಳೆದಿದ್ದರು.

ವೈಯಕ್ತಿಕವಾಗಿ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದರೂ ಮುಕೇಶ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ತಂಡ ಸೇರಿಕೊಂಡರು. ಇದು ಆಟದ ಬಗೆಗಿನ ಅವರ ಬದ್ಧತೆಯ ಪ್ರತೀಕವೆನಿಸಿತು. ಆಟ ಎಲ್ಲಕ್ಕಿಂತ ಹೆಚ್ಚಿನದು ಎಂಬ ಅವರ ಮನೋಭಾವಕ್ಕೆ ಕನ್ನಡಿ ಹಿಡಿಯಿತು.
ಮುಖದಲ್ಲಿ ಕ್ರೀಡಾ ಮನೋಭಾವ ಹೊರತುಪಡಿಸಿ ಯಾವುದೇ ದುಃಖದ ಛಾಯೆ ತೋರ್ಪಡಿಸದೇ ಕ್ರೀಡಾಸ್ಫೂರ್ತಿ ಮೆರೆದರು. ಹೊಸ ಬಾಲ್ನೊಂದಿಗೆ ದಾಳಿಯನ್ನು ಆರಂಭಿಸಿದ ಮುಕೇಶ್ ಮೊದಲ ಓವರ್ನಲ್ಲೇ ಎದುರಾಳಿಗಳಿಗೆ ಹೊಡೆತ ನೀಡಿ ವಿಕೆಟ್ ಕಬಳಿಸಿದರು.
ಅವರ ಪ್ರತಿ ಹೆಜ್ಜೆಯಲ್ಲೂ ಭಾರವಾದ ಭಾವನೆಗಳು, ನೆನಪುಗಳು ಮತ್ತು ದುಃಖದ ಛಾಯೆ ಇತ್ತು. ಆದರೂ ತಂಡಕ್ಕೆ ತಮ್ಮ ಅಗತ್ಯತೆ ಇದೆ ಎಂಬ ಭಾವನೆಯಿಂದ ಆಡಿದರು. ಮುಂಬೈ ಇಂಡಿಯನ್ಸ್ ವಿರುದ್ಧ 103 ರನ್ಗಳ ಭರ್ಜರಿ ಜಯದಲ್ಲಿ ತಂಡಕ್ಕೆ ತಮ್ಮದೇ ಕೊಡುಗೆ ನೀಡಿದರು.