ಲಕ್ನೋದಲ್ಲಿ ಭೀಕರ ಅಗ್ನಿ ಅವಘಡ: 280ಕ್ಕೂ ಹೆಚ್ಚು ಗುಡಿಸಲು ಭಸ್ಮ; 1,000ಕ್ಕೂ ಅಧಿಕ ಮಂದಿ ನಿರಾಶ್ರಿತರು!

ಲಕ್ಕೋ: ನಗರದ ವಿಕಾಸ್ ನಗರ ಪ್ರದೇಶದ ಸೆಕ್ಸರ್-11ರಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 280ಕ್ಕೂ ಹೆಚ್ಚು ಗುಡಿಸಲುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, 1,000ಕ್ಕೂ ಅಧಿಕ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ ಎಂದು ಲಕ್ಷ್ಮೀ ಪೊಲೀಸ್ ಆಯುಕ್ತ ಅಮರೇಂದ್ರ ಸೆಂಗರ್ ತಿಳಿಸಿದ್ದಾರೆ.
ಈ ಗುಡಿಸಲುಗಳಲ್ಲಿ ವಾಸಿಸುತ್ತಿದ್ದವರು ಬಹುತೇಕ ಸಮೀಪದ ಜಿಲ್ಲೆಗಳು ಹಾಗೂ ಇತರ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರಾಗಿದ್ದರು. ಸಂಜೆ 5.30ರ ವೇಳೆಗೆ ಬೆಂಕಿ ದುರಂತ ಸಂಭವಿಸಿದ್ದು ಗುಡಿಸಲುಗಳ ದಟ್ಟಣೆಯ ಪ್ರದೇಶವನ್ನು ಕ್ಷಣಾರ್ಧದಲ್ಲೇ ಬೆಂಕಿ ಆವರಿಸಿತು. ಗುಡಿಸಲುಗಳಲ್ಲಿ ಇರಿಸಿಕೊಂಡಿದ್ದ ಸುಮಾರು 50 ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಯಿತು.ಆವಾಸ್ ವಿಕಾಸ್ ಪರಿಷತ್ ನ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಡೇರೆಗಳು ಸಂಪೂರ್ಣ ಭಸ್ಮವಾಗಿವೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಕಿ ಆಕಸ್ಮಿಕದ ಬಳಿಕ ಹಲವು ಕಿಲೋಮೀಟರ್ ದೂರದವರೆಗೆ ದಟ್ಟವಾದ ಕಪ್ಪು ಹೊಗೆ ಇಡೀ ಆವರಿಸಿದ್ದು ಈ ತೀವ್ರತೆಯ ಹೊರತಾಗಿಯೂ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಘಟನೆ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ತುರ್ತು ಸೇವೆಗಳ ವಿಭಾಗಕ್ಕೆ ನಿರ್ದೇಶನ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯ ಮೇಲೆ ನಿಗಾ ಇರಿಸುವಂತೆ ಹಾಗೂ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.ಸಂತ್ರಸ್ತ ಕುಟುಂಬಗಳ ತ್ವರಿತ ಸ್ಥಳಾಂತರ, ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಮತ್ತು ಆಹಾರ, ವಸತಿ ಹಾಗೂ ಮೂಲ ಸೌಕರ್ಯಗಳು ಸೇರಿದಂತೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಪೂರೈಸಲು ಆದೇಶಿಸಿದ್ದಾರೆ. ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವಂತೆ ಹಾಗೂ ಪರಿಸ್ಥಿತಿಯನ್ನು ತಕ್ಷಣ ನಿಯಂತ್ರಿಸುವಂತೆ ಸಲಹೆ ಮಾಡಿದ್ದಾರೆ.
