ಮಣಿಪಾಲ: ಶಾಂತಿನಗರದ ಕೊಲೆ ಯತ್ನ ಹಾಗೂ ಕಳವು ರಹಸ್ಯ ಪತ್ತೆ; ಅಂಕೋಲಾ ಮೂಲದ ಆಪ್ತ ಗೆಳತಿ ಸುಷ್ಮಾ ನಾಯ್ಕ ಬಂಧನ!

ಮಣಿಪಾಲ : ಮಣಿಪಾಲದ ಶಾಂತಿನಗರದ ಬಾಡಿಗೆ ಕೋಣೆಯೊಂದರಲ್ಲಿ ಅಂಕೋಲಾ ಮೂಲದ ಯೋಗೀತಾ (23) ಎಂಬ ಯುವತಿಯ ಕೊಲೆಗೆ ಯತ್ನಿಸಿ, ಚಿನ್ನಾಭರಣ ಕಳವು ಮಾಡಿದ್ದ ರಹಸ್ಯ ಪ್ರಕರಣವನ್ನು ಭೇದಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಯೋಗೀತಾಳ ಪಕ್ಕದ ರೂಮಿನಲ್ಲೇ ವಾಸವಿದ್ದ ಆಕೆಯ ಆಪ್ತ ಸ್ನೇಹಿತೆಯೇ ಈ ಭೀಕರ ಕೃತ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾಳೆ. ಅಂಕೋಲಾ ತಾಲೂಕಿನ ಖೇಣಿ ಬಾವಿಕೇರಿ ಗ್ರಾಮದ ನಿವಾಸಿ ಸುಷ್ಮಾ ಅಣ್ಣಪ್ಪ ನಾಯ್ಕ (31) ಬಂಧಿತ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.

ಘಟನೆಯ ವಿವರ:
ಗಾಯಾಳು ಯೋಗೀತಾ ತನ್ನ ಇಬ್ಬರು ಗೆಳತಿಯರೊಂದಿಗೆ ಶಾಂತಿನಗರದ ಕೊಠಡಿಯೊಂದರಲ್ಲಿ ವಾಸವಿದ್ದಳು. ಮೇ 12ರಂದು ಆಕೆಯ ರೂಮ್ ಮೇಟ್ಗಳು ರಾತ್ರಿ ಪಾಳಿ (ನೈಟ್ ಶಿಫ್ಟ್) ಕೆಲಸಕ್ಕೆ ಹೋಗಿದ್ದರು. ಮೇ 13ರ ಬುಧವಾರ ಬೆಳಗ್ಗೆ ಅವರು ಕೆಲಸ ಮುಗಿಸಿ ಕೋಣೆಗೆ ಮರಳಿ ಬಂದಾಗ, ಯೋಗೀತಾ ತಲೆಗೆ ಗಂಭೀರ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಕೋಣೆಯಲ್ಲಿದ್ದ ಬಂಗಾರದ ಸರ ಮತ್ತು ಕಿವಿಯೋಲೆ ನಾಪತ್ತೆಯಾಗಿದ್ದವು. ಅಪರಿಚಿತರು ಸಿಮೆಂಟ್ ಕಲ್ಲಿನಿಂದ ಹೊಡೆದು ಚಿನ್ನಾಭರಣ ದೋಚಿದ್ದಾರೆ ಎಂದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಸಿಟಿವಿ ಮತ್ತು ತೀವ್ರ ವಿಚಾರಣೆ:
ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ (ಸಿಪಿಐ) ಮಹೇಶ್ ಪ್ರಸಾದ್ ನೇತೃತ್ವದ ವಿಶೇಷ ತಂಡವು ತನಿಖೆ ಕೈಗೆತ್ತಿಕೊಂಡಿತು. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಹಾಗೂ ಸ್ಥಳೀಯರ ವಿಚಾರಣೆಯ ಬಳಿಕ ಪೊಲೀಸರಿಗೆ ಯೋಗೀತಾಳ ಪಕ್ಕದ ಕೋಣೆಯಲ್ಲಿದ್ದ ಸುಷ್ಮಾಳ ಮೇಲೆ ಸಂಶಯ ಮೂಡಿದೆ. ಆಕೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಹಣದ ಆಸೆಗಾಗಿ ತಾನೇ ಈ ಕೃತ್ಯ ಎಸಗಿರುವುದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ.
ಕೃತ್ಯಕ್ಕೆ ಕಾರಣವೇನು?:
ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ಸುಷ್ಮಾಗೆ ತೀವ್ರ ಹಣಕಾಸಿನ ತೊಂದರೆ ಇತ್ತು. ಕಳೆದ 3 ವರ್ಷಗಳಿಂದ ಆಕೆ ದುಡಿದ ಹಣ ಸ್ವಂತ ಖರ್ಚಿಗೇ ಸಾಕಾಗುತ್ತಿದ್ದರಿಂದ ಊರಿನಲ್ಲಿದ್ದ ಹೆತ್ತವರಿಗೆ ಹಣ ಕಳುಹಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಮನೆಯವರು, ಕೆಲಸ ಬಿಟ್ಟು ತಕ್ಷಣ ಊರಿಗೆ ವಾಪಸ್ ಬರುವಂತೆ ಪೀಡಿಸುತ್ತಿದ್ದರು. ಮನೆಯವರಿಗೆ ಕಳುಹಿಸಲು ಹಣ ಹೊಂದಿಸುವ ಅನಿವಾರ್ಯತೆಯಲ್ಲಿದ್ದ ಸುಷ್ಮಾ, ತನ್ನ ಸ್ನೇಹಿತೆ ಯೋಗೀತಾಳ ಚಿನ್ನದ ಸರ ಹಾಗೂ ಕಿವಿಯ ಬೆಂಡೋಲೆಗಳನ್ನು ದೋಚಲು ಸಂಚು ರೂಪಿಸಿದ್ದಳು.
ನಡುರಾತ್ರಿ ದಾರುಣ ಹಲ್ಲೆ:
ಯೋಜನೆಯಂತೆ ಮೇ 12ರ ರಾತ್ರಿ 9:30ರ ಸುಮಾರಿಗೆ ಸುಷ್ಮಾ, ಯೋಗೀತಾಳ ರೂಮಿಗೆ ಬಂದು ಆಕೆಯ ಜೊತೆಯೇ ಮಲಗಿದ್ದಳು. ಮೇ 13ರ ಬೆಳಗಿನ ಜಾವ 4:30ರ ಸುಮಾರಿಗೆ ಯೋಗೀತಾ ಗಾಢ ನಿದ್ರೆಯಲ್ಲಿದ್ದಾಗ, ಸುಷ್ಮಾ ಅದಾಗಲೇ ಕೋಣೆಯೊಳಗೆ ಅಡಗಿಸಿಟ್ಟಿದ್ದ ಭಾರವಾದ ಕಾಂಕ್ರೀಟ್ ಹಾಲೋ ಬ್ಲಾಕ್ (ಸಿಮೆಂಟ್ ಕಲ್ಲು) ಕಲ್ಲಿನಿಂದ ಯೋಗೀತಾಳ ತಲೆಗೆ ಬಲವಾಗಿ ಜಜ್ಜಿದ್ದಾಳೆ. ಯೋಗೀತಾ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು ಕಿವಿಯೋಲೆಗಳನ್ನು ಕಿತ್ತುಕೊಂಡು, ಯಾರಿಗೂ ಅನುಮಾನ ಬಾರದಂತೆ ತನ್ನ ಕೋಣೆಗೆ ತೆರಳಿ ಮಲಗಿದ್ದಳು.
ಆಸ್ಪತ್ರೆಗೆ ಸೇರಿಸುವಾಗಲೂ ನಾಟಕ!
ಬೆಳಗ್ಗೆ ಯೋಗೀತಾಳ ರೂಮ್ ಮೇಟ್ಗಳಾದ ಮೇಘಾ ಗೌಡ, ಗಗನಾ ಮತ್ತು ನಾಗರತ್ನ ಕೆಲಸ ಮುಗಿಸಿ ಬಂದು ಯೋಗೀತಾಳ ಸ್ಥಿತಿ ಕಂಡು ಕಿರುಚಾಡಿದ್ದಾರೆ. ಈ ವೇಳೆ ಏನೂ ತಿಳಿಯದವಳಂತೆ ತನ್ನ ರೂಮಿನಿಂದ ಓಡಿಬಂದ ಸುಷ್ಮಾ, ಅವರೊಂದಿಗೆ ಸೇರಿ ಯೋಗೀತಾಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲು ನೆರವಾಗಿ, ಪೊಲೀಸರ ಹಾದಿ ತಪ್ಪಿಸಲು ಕಣ್ಣೊರೆಸುವ ನಾಟಕವಾಡಿದ್ದಳು ಎಂದು ತನಿಖೆಯಿಂದ ಬಹಿರಂಗವಾಗಿದೆ.