ಮಂಗಳೂರು: ಕರಾವಳಿಗೆ ಮುಂಗಾರು ಅಧಿಕೃತ ಎಂಟ್ರಿ; ಜೂನ್ 8ರ ವರೆಗೆ ಹವಾಮಾನ ಇಲಾಖೆಯಿಂದ ‘ಆರೆಂಜ್ ಅಲರ್ಟ್’ ಘೋಷಣೆ

ಮಂಗಳೂರು: ಕೇರಳದ ಬೆನ್ನಲ್ಲೇ ಕರಾವಳಿ ಕರ್ನಾಟಕಕ್ಕೂ ನೈಋತ್ಯ ಮುಂಗಾರು (Monsoon) ಗುರುವಾರ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿದ್ದು, ಮುಂಬರುವ ದಿನಗಳಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ (IMD) ಜೂನ್ 8ರ ವರೆಗೆ ಕರಾವಳಿ ಭಾಗದಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಿದೆ.

ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಗುರುವಾರ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಮೂಡುಬಿದಿರೆ, ಸುಳ್ಯ, ಬಂಟ್ವಾಳ, ಪುತ್ತೂರು ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಉತ್ತಮ ಮಳೆಯಾದ ವರದಿಯಾಗಿದೆ. ಮಂಗಳೂರು ನಗರದಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಉತ್ತಮ ಮಳೆಯಾಗಿದ್ದು, ಮಧ್ಯಾಹ್ನದ ಬಳಿಕ ತುಸು ಬಿಡುವು ನೀಡಿತ್ತಾದರೂ ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಇನ್ನೆರಡು ದಿನಗಳಲ್ಲಿ ಮುಂಗಾರು ಮಾರುತಗಳು ಮತ್ತಷ್ಟು ಬಲಗೊಳ್ಳಲಿದ್ದು, ಕರಾವಳಿಯುದ್ದಕ್ಕೂ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ಮುಂಗಾರು ತೀವ್ರಗೊಳ್ಳಲಿರುವ ಹಿನ್ನೆಲೆಯಲ್ಲಿ ಜೂನ್ 8ರ ವರೆಗೆ ಕರ್ನಾಟಕ ಕರಾವಳಿ ಭಾಗದಲ್ಲಿ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರ ಪ್ರಕ್ಷುಬ್ಧವಾಗಿರಲಿದ್ದು, ಅಲೆಗಳ ಅಬ್ಬರ ಹೆಚ್ಚಿರಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರ ಪ್ರದೇಶಗಳಿಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 5 ರಿಂದ 8 ರವರೆಗಿನ ಅವಧಿಯಲ್ಲಿ ಗುಡುಗು, ಮಿಂಚು ಸಹಿತ 115.6 ಮಿಲಿ ಮೀಟರ್‌ನಿಂದ ಹಿಡಿದು 204.4 ಮಿಲಿ ಮೀಟರ್‌ವರೆಗೆ ಅತ್ಯಂತ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಸಾರ್ವಜನಿಕರು ಹಾಗೂ ನದಿ ಪಾತ್ರದ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಕೋರಿದೆ.