ಗರ್ಲ್‌ಫ್ರೆಂಡ್‌ಗೆ ಐಫೋನ್ ಗಿಫ್ಟ್ ನೀಡಲು ನೀರಿನ ನಲ್ಲಿಗಳನ್ನು ಕದ್ದ ಯುವಕರು!

ನಾಗಪುರ: ಪ್ರೇಮಪಾಶಕ್ಕೆ ಬಿದ್ದ ಯುವಕರು ತಮ್ಮ ಗರ್ಲ್‌ಫ್ರೆಂಡ್‌ಗಳನ್ನು ಮೆಚ್ಚಿಸಲು ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ಮಹಾರಾಷ್ಟ್ರದ ನಾಗಪುರದಲ್ಲಿ ಒಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಮ್ಮ ಪ್ರೇಯಸಿಯರಿಗೆ ದುಬಾರಿ ಬೆಲೆಯ ಐಫೋನ್ (iPhone) ಮೊಬೈಲ್‌ಗಳನ್ನು ಉಡುಗೊರೆಯಾಗಿ ನೀಡಲು ಹಣವಿಲ್ಲದೆ, ಮೂವರು ಯುವಕರು ಸೇರಿ ಅಂಗಡಿ ಮತ್ತು ಐಷಾರಾಮಿ ಬಂಗಲೆಗಳಿಂದ ಬರೋಬ್ಬರಿ 6.5 ಲಕ್ಷ ರೂಪಾಯಿ ಮೌಲ್ಯದ ನೀರಿನ ಕದ್ದಿದ್ದಾರೆ. ಈ ಮೂವರನ್ನು ನಾಗಪುರ ಪೊಲೀಸರು ಬಂಧಿಸಿದ್ದಾರೆ.
‘ರಾಹುಲ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್’ ಹೆಸರಿನ ಗೋದಾಮಿನ ಮಾಲೀಕರಾದ ರಾಹುಲ್ ಜಯಚಂದ್ ಬಾತ್ರಾ ಅವರು ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಬಂಧಿತ ಯುವಕರು ನಾಗಪುರದ ಹಜಾರಿಪಹಾಡ್ ಮತ್ತು ಸೆಮಿನರಿ ಹಿಲ್ಸ್‌ನಂತಹ ಗಣ್ಯರು ವಾಸಿಸುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದರು. ಇಲ್ಲಿನ ಗೋಡೌನ್, ದೊಡ್ಡ ದೊಡ್ಡ ಬಂಗಲೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ, ಅಲ್ಲಿ ಅಳವಡಿಸಲಾಗಿದ್ದ ಅತ್ಯಂತ ದುಬಾರಿ ಮೌಲ್ಯದ ಹಿತ್ತಾಳೆ ಮತ್ತು ಕರಕುಶಲ ವಿನ್ಯಾಸದ ನಲ್ಲಿಗಳನ್ನು ಬಿಚ್ಚಿ ಕದಿಯುತ್ತಿದ್ದರು. ಕದ್ದ ಸಾಮಗ್ರಿಗಳ ಒಟ್ಟು ಮೌಲ್ಯ 6.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿತ್ತು.ಈ ಬಗ್ಗೆ ದೂರು ದಾಖಸಿಕೊಂಡ ಗಿಟ್ಟಿಖಾದನ್ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ಆರಂಭಿಸಿ, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಈ ವೇಳೆ ಮೂವರು ಯುವಕರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಪತ್ತೆಯಾಯಿತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕಥೆ ಹೊರಬಿದ್ದಿದೆ. ಯುವಕರು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಕದ್ದ ಹಣದಲ್ಲಿ ಐಫೋನ್ ಖರೀದಿ!
ಪೊಲೀಸರ ವಿಚಾರಣೆಯ ವೇಳೆ ಯುವಕರು ನೀಡಿದ ಕಾರಣ ಕೇಳಿ ಅಧಿಕಾರಿಗಳೇ ಒಂದು ಕ್ಷಣ ದಂಗಾಗಿದ್ದಾರೆ. ತಮಗೆ ಯಾವುದೇ ದುರಭ್ಯಾಸಗಳಿರಲಿಲ್ಲ, ಆದರೆ ತಮ್ಮ ಗರ್ಲ್‌ಫ್ರೆಂಡ್‌ಗಳು ಐಫೋನ್ ಬೇಕೆಂದು ಹಠ ಹಿಡಿದಿದ್ದರು. ಅದನ್ನು ಕೊಡಿಸಲು ಹಣವಿಲ್ಲದ ಕಾರಣ ಅತ್ಯಂತ ಸುಲಭವಾಗಿ ಕಳವು ಮಾಡಬಹುದಾದ ಮತ್ತು ಮಾರುಕಟ್ಟೆಯಲ್ಲಿ ಭಾರೀ ಬೆಲೆ ಬಾಳುವ ಐಷಾರಾಮಿ ನಲ್ಲಿಗಳನ್ನು ಕದ್ದಿದ್ದಾಗಿ ಅವರು ತಿಳಿಸಿದ್ದಾರೆ. ಕದ್ದ ನಲ್ಲಿಗಳನ್ನು ಗುಜರಿ ಅಂಗಡಿಗೆ ಮಾರಿ ಬಂದ ಹಣದಲ್ಲಿ ಈಗಾಗಲೇ ಐಫೋನ್‌ಗಳನ್ನು ಖರೀದಿಸಿ ಗೆಳತಿಯರಿಗೆ ಉಡುಗೊರೆ ನೀಡಿದ್ದರು!
ಪೊಲೀಸರು ಯುವಕರಿಂದ ಕದ್ದ ನಲ್ಲಿಗಳು, ಕಳ್ಳತನಕ್ಕೆ ಬಳಸಿದ ಬೈಕ್ ಹಾಗೂ ಗೆಳತಿಯರಿಗೆ ನೀಡಿದ್ದ ಐಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿದೆ.
