ಮಂಗಳೂರು: ಸಹಾಯಕ್ಕೆ ಹೋದ ವ್ಯಕ್ತಿಯ ಕಣ್ಣಿಗೆ ಖಾರದ ಪುಡಿ ಎರಚಿ ಲೂಟಿ; ₹46,000 ಹಣದೊಂದಿಗೆ ಖದೀಮರು ಪರಾರಿ

ಮಂಗಳೂರು: ಬೈಕ್ ಕೆಟ್ಟಿದೆ ಎಂದು ನಂಬಿಸಿ, ಸಹಾಯಕ್ಕೆ ಬಂದ ವ್ಯಕ್ತಿಯ ಕಣ್ಣಿಗೆ ಖಾರದ ಪುಡಿ ಎರಚಿ ಸ್ಕೂಟರ್ ಡಿಕ್ಕಿಯಲ್ಲಿದ್ದ ನಗದನ್ನು ದೋಚಿರುವ ಘಟನೆ ಬಂಗ್ಲೆಗುಡ್ಡೆ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.

ಗಂಜಿಮಠದ ಝಾರಾ ಹಾಲ್ನಲ್ಲಿ ಅಡುಗೆ ಮೇಲ್ವಿಚಾರಕರಾಗಿರುವ ಮೊಹಮ್ಮದ್ ಮನ್ಸೂರ್ ಅವರು ಏಪ್ರಿಲ್ 26ರಂದು ರಾತ್ರಿ ಕೆಲಸ ಮುಗಿಸಿ ಸ್ಕೂಟರ್ನಲ್ಲಿ ಮನೆಗೆ ಮರಳುತ್ತಿದ್ದರು. ರಾತ್ರಿ 9:10ರ ಸುಮಾರಿಗೆ ಬಂಗ್ಲೆಗುಡ್ಡೆ ತಲುಪಿದಾಗ, ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರು ಯುವಕರು ತಮ್ಮ ಸ್ಕೂಟರ್ ಕೆಟ್ಟಿದೆ ಎಂದು ಮನ್ಸೂರ್ ಅವರನ್ನು ತಡೆದಿದ್ದಾರೆ.
ಯುವಕರ ಮಾತನ್ನು ನಂಬಿ ಮನ್ಸೂರ್ ಅವರು ಪೆಟ್ರೋಲ್ ಪೈಪ್ ಪರಿಶೀಲಿಸಲು ಮುಂದಾದಾಗ, ಆರೋಪಿಗಳು ಏಕಾಏಕಿ ಅವರ ಮೈಮೇಲೆ ಮತ್ತು ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಕಣ್ಣಿನ ಉರಿಯಿಂದ ಮನ್ಸೂರ್ ಒದ್ದಾಡುತ್ತಿದ್ದಾಗ, “ಡಿಕ್ಕಿಯಲ್ಲಿ ಹಣ ಇರಬೇಕು” ಎಂದು ತುಳುವಿನಲ್ಲಿ ಮಾತನಾಡಿಕೊಂಡಿದ್ದ ಆರೋಪಿಗಳು, ಸ್ಕೂಟರ್ ಡಿಕ್ಕಿಯಲ್ಲಿದ್ದ ₹46,000 ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಬಳಿಕ ಮನ್ಸೂರ್ ಅವರು ದಾರಿಹೋಕರ ಸಹಾಯದಿಂದ ಮುಖ ತೊಳೆದುಕೊಂಡು ಬ್ಯಾಗ್ ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.