ಮಂಗಳೂರು: ‘ಲಕ್ಕಿ ಸ್ಕೀಮ್’ ಹೆಸರಿನಲ್ಲಿ ಕೋಟಿಗಟ್ಟಲೆ ವಂಚನೆ; ನಾಲ್ವರು ವಂಚಕರ ಬಂಧನ

ಮಂಗಳೂರು: ಲಕ್ಕಿ ಸ್ಕೀಮ್ ಹೆಸರಿನಲ್ಲಿ ಕಾರು, ಬೈಕು, ಫ್ಲ್ಯಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದು ಮೊದಲಾದವುಗಳನ್ನು ಡ್ರಾದಲ್ಲಿ ವಿಜೇತರಾದವರಿಗೆ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ತಿಂಗಳಿಗೆ 1 ಸಾವಿರ ರೂ. ನಂತೆ ಕೋಟ್ಯಂತರ ರೂ. ಪಡೆದು ಬಹುಮಾನ ನೀಡದೆ ವಂಚನೆ ಮಾಡಿದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ -1
ನ್ಯೂ ಇಂಡಿಯಾ ರಾಯಲ್ ಸ್ಕೀಮ್ ಆಯಂಡ್ ಗ್ರೀನ್ ಲೈಟ್ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಪ್ರತಿ ತಿಂಗಳು ಒಂದು ಸಾವಿರ ರೂ.ನಂತೆ ಒಂದು ವರ್ಷದ ವರೆಗೆ ಸುಮಾರು 13 ಸಾವಿರ ಮಂದಿಯಿಂದ 10 ಕೋ.ರೂ.ಗೂ ಅಧಿಕ ಹಣವನ್ನು ಸಂಗ್ರಹಿಸಿ, ಸ್ಕೀಮ್ ಮುಗಿದ ಬಳಿಕ ಗ್ರಾಹಕರಿಗೆ ವಂಚಿಸಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಜಪೆ ನಿವಾಸಿ ಮೊಹಮ್ಮದ್ ಅಶ್ರಫ್ ಬಜಪೆ (43) ಮತ್ತು 7ನೇ ಬ್ಲಾಕ್ ಕೃಷ್ಣಾಪುರದ ಮೊಹಮ್ಮದ್ ಹನೀಫ್ (50) ಬಂಧಿತ ಆರೋಪಿಗಳು.
ಸ್ಕೀಮ್ ಕಂತು ಮುಗಿದ ಅನಂತರ ಡೆಪಾಸಿಟ್ ಮಾಡಿದ ಹಣ ಹಾಗೂ ಬಹುಮಾನಗಳನ್ನು ನೀಡದೆ, ಎಲ್ಲರಿಗೂ ಹಣವನ್ನು ನೀಡುತ್ತೇವೆ ಎಂದು ಆಶ್ವಾಸನೆ ನೀಡುತ್ತ ಬಂದಿದ್ದ ಆರೋಪಿಗಳು ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇದ್ದ ಕಚೇರಿಯನ್ನು ಏಕಾಏಕಿ ಮುಚ್ಚಿದ್ದಾರೆ.
ಈ ಬಗ್ಗೆ ಸಂತ್ರಸ್ತರೊಬ್ಬರು ಸುರತ್ಕಲ್ ಠಾಣೆಯಲ್ಲಿ ಆ. 11ರಂದು ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ಆ.12ರಂದು ಬಂಧಿಸಿ 13ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಆ.19ರಂದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಗಳು ಈ ಹಿಂದೆ ಮಾಡಿದ ನ್ಯೂ ಇಂಡಿಯಾ ಪ್ರೀಮಿಯಂ ಸ್ಕೀಮ್ ಮತ್ತು ನ್ಯೂ ಇಂಡಿಯಾ ಬಂಪರ್ ಸ್ಕೀಮ್‌ಗಳ ಬಗ್ಗೆಯೂ ತನಿಖೆಯನ್ನು ಮಾಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪ್ರಕರಣ-2
ನ್ಯೂ ಶೈನ್ ಎಂಟರ್‌ಪ್ರೈಸಸ್ ಲಕ್ಕಿ ಸ್ಕೀಮ್‌ನಲ್ಲಿ 9 ತಿಂಗಳು 1 ಸಾವಿರ ರೂ. ಪಾವತಿಸಿ ಕೊನೆಯ 2 ತಿಂಗಳು 1,500 ರೂ. ಹೀಗೆ ಒಟ್ಟು 11 ತಿಂಗಳ ಅವ ಧಿಗೆ ಸುಮಾರು 3 ಸಾವಿರ ಮಂದಿಯಿಂದ 4.20 ಕೋ.ರೂ. ಹಣ ಸಂಗ್ರಹಿಸಿ ಗ್ರಾಹಕರಿಗೆ ವಂಚನೆ ಮಾಡಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಟಿಪಳ್ಳ ಸುರತ್ಕಲ್ ನಿವಾಸಿ ಅಹಮ್ಮದ್ ಖುರೇಶಿ (34) ಮತ್ತು ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿ ನಝೀರ್ ಅಲಿಯಾಸ್ ನಾಸೀರ್ (39) ಬಂಧಿತ ಆರೋಪಿಗಳು.
ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ನ್ಯೂ ಶೈನ್ ಎಂಟರ್‌ಪ್ರೈಸಸ್ ಕಚೇರಿಯನ್ನು ಏಕಾಏಕಿಯಾಗಿ ಬಂದ್ ಮಾಡಿ ಹಣ ಕಟ್ಟಿದ ಗ್ರಾಹಕರಿಗೆ ವಂಚನೆ ಮಾಡಿದ ಬಗ್ಗೆ ಸಂತ್ರಸ್ತರೊಬ್ಬರು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಆ.16ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.19ರಂದು ಆರೊಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆರೋಪಿಗಳನ್ನು ಆ. 25ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಆರೋಪಿ ಅಹಮ್ಮದ್ ಖುರೇಶಿ ನೀಡಿರುವ ಹೇಳಿಕೆಯಲ್ಲಿ ವಫಾ ಎಂಟರ್‌ಪ್ರೈಸಸ್ ಲಕ್ಕಿ ಸ್ಕೀಂನ ಅಬ್ದುಲ್ ವಹಾಬ್ ಮತ್ತು ಬಶೀರ್ ಅವರೊಂದಿಗೆ ಸೇರಿ ಈ ಹಿಂದೆ ನಡೆಸಿರುವ ಲಕ್ಕಿ ಸ್ಕೀಮ್ ಯೋಜನೆಗಳ ಬಗ್ಗೆಯೂ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕೊಲೆಯತ್ನ ಪ್ರಕರಣದ ಆರೋಪಿಗಳು
ಅಹಮ್ಮದ್ ಖುರೇಶಿಯ ಮೇಲೆ ಸುರತ್ಕಲ್ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣ ಮತ್ತು ಪಾಂಡೇಶ್ವರ ಠಾಣೆಯಲ್ಲಿ ಸರಕಾರಿ ನೌಕರನಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿದೆ. ನಝೀರ್ ಮೇಲೆ ಸುರತ್ಕಲ್ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ ದಾಖಲಾಗಿದೆ. ಆರೋಪಿಗಳು ವಿವಿಧ ಕಚೇರಿಗಳಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಕಂಪ್ಯೂಟರ್ ಉಪಕರಣಗಳು, ಡ್ರಾ ಕಾಯಿನ್, ಲಕ್ಕಿ ಡ್ರಾ ಪೆಟ್ಟಿಗೆ, ರಿಜಿಸ್ಟರ್‌ಗಳು, ಡಿವಿಆರ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೊತ್ತುಗಳ ಜಪ್ತಿಗೆ ಡಿಸಿಗೆ ಪತ್ರ
ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಬೋಳೂರು ಗ್ರಾಮದ ಮನೆ, ಬಜಪೆಯಲ್ಲಿರುವ ಮನೆ, ಬಜಪೆ ತಾರಿಕಂಬ್ಳದಲ್ಲಿರುವ 5 ಪ್ಲ್ಯಾಟ್‌ಗಳು, ಕಚೇರಿಯಲ್ಲಿದ್ದ ಕಂಪ್ಯೂಟರ್ ಉಪಕರಣಗಳನ್ನು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಯ್ದೆಯಂತೆ ಆರೋಪಿಗಳು ಲಕ್ಕಿ ಸ್ಕೀಮ್‌ನ ಹಣದಲ್ಲಿ ಖರೀದಿಸಿದ ಮನೆ, ನಿವೇಶನ, ಪ್ಲ್ಯಾಟ್, ವಾಹನಗಳು, ಚಿನ್ನಾಭರಣಗಳು ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲು ಜಿಲ್ಲಾ ಧಿಕಾರಿ, ಉಪ ವಿಭಾಗ ದಂಡಾ ಕಾರಿ, ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ.
ಠಾಣೆಗೆ ಹೇಳಿಕೆ ನೀಡಬಹುದು
ಲಕ್ಕಿ ಸ್ಕೀಮ್‌ಗಳಿಗೆ ಸೇರಿದ ಸದಸ್ಯರು ಹಾಗೂ ಸದಸ್ಯರಿಂದ ಹಣ ಸಂಗ್ರಹಣೆ ಮಾಡಿದ ಏಜೆಂಟ್‌ಗಳು ಸೂಕ್ತ ದಾಖಲಾತಿಯೊಂದಿಗೆ ಠಾಣೆಗೆ ಬಂದು ಹೇಳಿಕೆ ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
