ಮದರಸಾದಲ್ಲಿ ‘Made in Pakistan’ ಫ್ಯಾನ್ ಪತ್ತೆಯಾದ ಪ್ರಕರಣ ಸೌದಿ ಅರೇಬಿಯಾದಿಂದ ಬಂದಿದ್ದ ಉಡುಗೊರೆ ಎಂದು ಸಾಬೀತುಪಡಿಸಿದ ದಾಖಲೆಗಳು

ಕುಶಿನಗರ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಮದರಸಾವೊಂದರಲ್ಲಿ ಅಳವಡಿಸಲಾಗಿದ್ದ ಸೀಲಿಂಗ್ ಫ್ಯಾನ್ ರಿಪೇರಿಗೆ ಕಳುಹಿಸಿದ ವೇಳೆ ಅದರ ಮೇಲೆ ‘Made in Pakistan’ ಎಂಬ ಲೇಬಲ್ ಪತ್ತೆಯಾಗಿದ್ದು, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮದರಸಾದಲ್ಲಿದ್ದ ಬಿಳಿ ಬಣ್ಣದ ಸೀಲಿಂಗ್ ಫ್ಯಾನ್ ಕೆಲ ದಿನಗಳಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಅದನ್ನು ಸ್ಥಳೀಯ ಎಲೆಕ್ನಿಷಿಯನ್ ಬಳಿ ದುರಸ್ತಿಗಾಗಿ ಕಳುಹಿಸಲಾಗಿತ್ತು. ಈ ವೇಳೆ ಫ್ಯಾನ್‌ನ ಮೋಟಾರ್ ಹೌಸಿಂಗ್ ಮೇಲ್ಬಾಗದಲ್ಲಿದ್ದ ‘ಮೇಡ್ ಇನ್ ಪಾಕಿಸ್ತಾನ್’ ಎಂಬ ಲೇಬಲ್ ಮತ್ತು ಬರೆದಿರುವುದು ಎಲೆಕ್ನಿಷಿಯನ್ ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಬಳಿಕ ಫ್ಯಾನ್‌ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಧಾರ್ಮಿಕ ಸಂಸ್ಥೆಯೊಂದರಲ್ಲಿ ಪಾಕಿಸ್ತಾನದಲ್ಲಿ ತಯಾರಿಸಲಾದ ಉತ್ಪನ್ನ ಹೇಗೆ ಅಳವಡಿಸಲಾಯಿತು ಎಂದು ಫೋಟೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಫ್ಯಾನ್ ರಿಪೇರಿ ಮಾಡಿದ ಎಲೆಕ್ನಿಷಿಯನ್ ಅದರ ಮೇಲಿನ ಗುರುತನ್ನು ಗಮನಿಸಿ ಚಿತ್ರವನ್ನು ಹಂಚಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಚರ್ಚೆಗೆ ಗ್ರಾಸವಾದ ನಂತರ ಸ್ಥಳೀಯ ಆಡಳಿತವೂ ಎಚ್ಚೆತ್ತುಕೊಂಡಿದೆ.
ಕುಶಿನಗರ ವೃತ್ತಾಧಿಕಾರಿ (ಸಿಒ) ಜಯಂತ್ ಯಾದವ್ ಅವರ ಪ್ರಕಾರ, ಮದರಸಾದ ವ್ಯವಸ್ಥಾಪಕ ಯೂನಸ್ ಅನ್ಸಾರಿ ಅವರನ್ನು ವಿಚಾರಣೆ ನಡೆಸಲಾಗಿದೆ. ಫ್ಯಾನ್ ಅನ್ನು ಸ್ಥಳೀಯ ನಿವಾಸಿಯೊಬ್ಬರು ಮದರಸಾಗೆ ದಾನವಾಗಿ ನೀಡಿದ್ದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ನಂತರ ಪೊಲೀಸರು ಅವರನ್ನು ಸಂಪರ್ಕಿಸಿದಾಗ, ಸೌದಿ ಅರೇಬಿಯಾದಲ್ಲಿ ನೆಲೆಸಿರುವ ತನ್ನ ಮಗ ಫ್ಯಾನ್ ಕಳುಹಿಸಿದ್ದಾಗಿ ಹಾಗೂ ಅದನ್ನು 2023ರಲ್ಲಿ ಮದರಸಾಗೆ ದಾನ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಬಳಿಕ ಸೌದಿ ಅರೇಬಿಯಾದಲ್ಲಿರುವ ಪುತ್ರನನ್ನೂ ಪೊಲೀಸರು ಸಂಪರ್ಕಿಸಿದ್ದು, ಅವರು 2020ರಲ್ಲಿ ಸೌದಿ ಅರೇಬಿಯಾದಲ್ಲಿ ಫ್ಯಾನ್ ಖರೀದಿಸಿ ತಂದೆಗೆ ಕಳುಹಿಸಿದ್ದಾಗಿ ಹೇಳಿದ್ದಾರೆ. ಖರೀದಿ ರಸೀದಿಯ ಪ್ರತಿಯನ್ನೂ ಪೊಲೀಸರಿಗೆ ಒದಗಿಸಿದ್ದಾರೆ ಎನ್ನಲಾಗಿದೆ.
“ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಅಗತ್ಯ ಕಸ್ಟಮ್ಸ್ ಸುಂಕ ಪಾವತಿಯಾಗಿದೆಯೇ ಎಂಬುದನ್ನೂ ಪರಿಶೀಲಿಸುತ್ತಿದ್ದೇವೆ,” ಎಂದು ಸಿಒ ಜಯಂತ್ ಯಾದವ್ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಆದರೆ ಇದು ಕೇವಲ ಆಕಸ್ಮಿಕ ಘಟನೆಯೇ ಅಥವಾ ಕಳವಳಕಾರಿ ವಿಷಯವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿದ ಮದರಸಾದ ಶಿಕ್ಷಕ ಮೆರಾಜುದ್ದೀನ್ ಅನ್ಸಾರಿ, “ಫ್ಯಾನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಅದನ್ನು ದುರಸ್ತಿಗೆ ಕಳುಹಿಸಲಾಗಿತ್ತು. ಅದರ ಮೇಲೆ ‘ಮೇಡ್ ಇನ್ ಪಾಕಿಸ್ತಾನ್ ಎಂದು ಬರೆಯಲಾಗಿದೆ ಎಂಬುದು ನಮಗೆ ತಿಳಿದಿರಲಿಲ್ಲ. ಪೊಲೀಸರು ಹಾಗೂ ಆಡಳಿತ ತನಿಖೆ ನಡೆಸಿದರೂ ಯಾವುದೇ ಅನುಮಾನಾಸ್ಪದ ಅಂಶ ಪತ್ತೆಯಾಗಿಲ್ಲ” ಎಂದು ಹೇಳಿದ್ದಾರೆ.
1994ರಿಂದ ಸಾರ್ವಜನಿಕರ ದೇಣಿಗೆಯ ನೆರವಿನಿಂದ ಮದರಸಾ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹಣಕಾಸಿನ ಕೊರತೆಯಿಂದ ಹಲವು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮದರಸಾವನ್ನು ತೊರೆದಿದ್ದಾರೆ. ಪ್ರಸ್ತುತ 50 ವಿದ್ಯಾರ್ಥಿಗಳಿಗೆ ತಾನೊಬ್ಬರೇ ಬೋಧನೆ ಮಾಡುತ್ತಿರುವುದಾಗಿ ಅನ್ಸಾರಿ ತಿಳಿಸಿದ್ದಾರೆ.