ಫೆಮಿನಾ ಮಿಸ್ ಇಂಡಿಯಾ-2026 ಕಿರೀಟ ಮುಡಿಗೇರಿಸಿಕೊಂಡ ಕಾರವಾರದ ಪ್ರತಿಭೆ ಸಾಧ್ವಿ ಸೈಲ್

ಭುವನೇಶ್ವರ : ದೇಶದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ‘ಫೆಮಿನಾ ಮಿಸ್ ಇಂಡಿಯಾ-2026’ರ ಫಿನಾಲೆಯಲ್ಲಿ ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸೈಲ್ ಅವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ರಾಷ್ಟ್ರೀಯ ವೇದಿಕೆಯಲ್ಲಿ ಕರಾವಳಿಯ ಪ್ರತಿಭೆಯೊಂದು ಮಿನುಗಿದಂತಾಗಿದೆ.

ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಅದ್ದೂರಿ ಸಮಾರಂಭದಲ್ಲಿ 61ನೇ ಆವೃತ್ತಿಯ ಈ ಸೌಂದರ್ಯ ಸ್ಪರ್ಧೆಯ ಫಲಿತಾಂಶ ಪ್ರಕಟವಾಯಿತು. ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸಿದ್ದ 29 ಸ್ಪರ್ಧಿಗಳ ಕಠಿಣ ಸವಾಲನ್ನು ಮೆಟ್ಟಿ ನಿಂತ ಸಾಧ್ವಿ ಸೈಲ್ ಅಂತಿಮವಾಗಿ ವಿಜೇತರಾಗಿ ಹೊರಹೊಮ್ಮಿದರು. 2025ರ ಮಿಸ್ ಇಂಡಿಯಾ ವಿನ್ನರ್ ನಿಕಿತಾ ಪೋರ್ವಾಲ್ ಅವರು ಸಾಧ್ವಿಗೆ ಕಿರೀಟ ತೊಡಿಸಿ ಸಂಭ್ರಮಿಸಿದರು.
ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ರಾಜನಂದಿನಿ ಅವರು ಪ್ರಥಮ ರನ್ನರ್ ಅಪ್ ಸ್ಥಾನ ಪಡೆದರೆ, ಜಮ್ಮು ಮತ್ತು ಕಾಶ್ಮೀರ ಮೂಲದ ಶ್ರೀತಿ ಅದ್ವೈತಾ ದ್ವಿತೀಯ ರನ್ನರ್ ಅಪ್ ಗೌರವಕ್ಕೆ ಪಾತ್ರರಾದರು. ಕರ್ನಾಟಕವನ್ನು ಪ್ರತಿನಿಧಿಸಿದ್ದ ಖುಷಿ ರಮೇಶ್ ಅವರು ಟಾಪ್ 15ರ ಹಂತದವರೆಗೆ ತಲುಪಿ ಗಮನ ಸೆಳೆದರು.
ಸಾಧ್ವಿ ಸೈಲ್ ಕೇವಲ ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಆರ್ಥಿಕತೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪದವಿ ಪಡೆದಿರುವ ಇವರು, ಈ ಸ್ಪರ್ಧೆಗಾಗಿ ವಿಶೇಷ ತಯಾರಿ ನಡೆಸಿದ್ದರು. ಛಾಯಾಗ್ರಹಣ, ಬ್ಯಾಡ್ಮಿಂಟನ್ ಹಾಗೂ ವಿಶೇಷವಾಗಿ ಜೇನುಸಾಕಣೆಯಂತಹ ವಿಭಿನ್ನ ಹವ್ಯಾಸಗಳನ್ನು ಹೊಂದಿರುವ ಸಾಧ್ವಿ, ಸ್ಪರ್ಧೆಯ ಹಿನ್ನೆಲೆಯಲ್ಲಿ 10 ಕೆಜಿ ತೂಕ ಇಳಿಸಿಕೊಂಡು ಶಿಸ್ತಿನ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದರು. ಈ ಗೆಲುವಿನೊಂದಿಗೆ ಸಾಧ್ವಿ ಅವರು 2026ರ ಸೆಪ್ಟೆಂಬರ್ 5ರಂದು ವಿಯಟ್ನಾಂನಲ್ಲಿ ನಡೆಯಲಿರುವ ‘ಮಿಸ್ ವರ್ಲ್ಡ್’ (ವಿಶ್ವ ಸುಂದರಿ) ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. “ಭಾರತವನ್ನು ಹೆಮ್ಮೆ ಪಡುವಂತೆ ಮಾಡುವುದೇ ನನ್ನ ಮುಂದಿನ ಗುರಿ” ಎಂದು ಸಾಧ್ವಿ ಹರ್ಷ ವ್ಯಕ್ತಪಡಿಸಿದ್ದಾರೆ. ಶಾಸಕ ಸತೀಶ್ ಸೈಲ್ ಅವರು ತಮ್ಮ ಮಗಳ ಈ ಐತಿಹಾಸಿಕ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.