ಬೀದರ್: ಬಿಸಿಲಿನ ಝಳಕ್ಕೆ ರಾಜ್ಯದಲ್ಲಿ ಮೊದಲ ಬಲಿ; ಉತ್ತರ ಪ್ರದೇಶದ 20 ವರ್ಷದ ಯುವಕ ಸಾ*ವು

ಬೀದರ್ : ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲಿನ ಝಳ ಮೊದಲ ಬಲಿ ಪಡೆದಿದೆ, ತೀವ್ರವಾದ ಬಿಸಿಲಿನ ಶಾಖಕ್ಕೆ ಸಿಲುಕಿ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಬೀದರ್ ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಮಿರ್ಜಾಪುರ್ ಪಲ್ಲಾ ಗ್ರಾಮದ ನಿವಾಸಿ ಮುಹಮ್ಮದ್ ಸಮೀರ್ (20) ಮೃತಪಟ್ಟ ದುರ್ದೈವಿ.

ಸಮೀರ್ ಕೆಲಸದ ನಿಮಿತ್ತ ಕೆಲ ದಿನಗಳ ಹಿಂದೆಯಷ್ಟೇ ಕಮಲನಗರಕ್ಕೆ ಬಂದಿದ್ದನು. ಏಪ್ರಿಲ್ 14ರಂದು ಬೆಳಿಗ್ಗೆ ತರಕಾರಿ ತರಲು ಮಾರುಕಟ್ಟೆಗೆ ತೆರಳಿದ್ದ ಈತ, ವಾಪಸ್ಸಾಗುವ ವೇಳೆ ಬಿಸಿಲಿನ ತೀವ್ರತೆಗೆ ತಲೆಸುತ್ತು ಬಂದು ಬಳಲಿದ್ದಾನೆ. ತಕ್ಷಣ ಸಮೀಪದ ಮೆಕಾನಿಕ್ ಅಂಗಡಿಯಲ್ಲಿ ನೀರು ಕುಡಿದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದಿದ್ದಾನೆ. ವಿಶ್ರಾಂತಿ ಪಡೆದ ನಂತರ ಪುನಃ ಮನೆಗೆ ತೆರಳುತ್ತಿದ್ದಾಗ ಡಿಗ್ಗಿ ಗ್ರಾಮದ ರಸ್ತೆಯಲ್ಲೇ ಸಮೀರ್ ಕುಸಿದು ಬಿದ್ದಿದ್ದಾನೆ. ಬಿಸಿಲಿನ ಝಳವೇ ಈ ಸಾವಿಗೆ ನೇರ ಕಾರಣ ಎಂದು ಮೃತನ ತಂದೆ ಲಯಿಕ್ ಅಹ್ಮದ್ ದೂರಿನಲ್ಲಿ ತಿಳಿಸಿದ್ದಾರೆ. ಕಮಲನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಸಹಜ ಸಾವು (UDR) ಪ್ರಕರಣ ದಾಖಲಿಸಿಕೊಂಡಿದ್ದಾರೆ.