Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಾರ್ಖಂಡ್: ಚಲಿಸುವ ರೈಲಿನಿಂದ ಒಂದೂವರೆ ತಿಂಗಳ ಮಗುವನ್ನು ಹೊರಗೆಸೆದು ಕೊಂದ ತಾಯಿ

Spread the love

ಚಕ್ರಧರಪುರ : ಹೆತ್ತ ತಾಯಿಯೇ ತನ್ನ ಒಂದೂವರೆ ತಿಂಗಳ ಹಸುಗೂಸನ್ನು ಚಲಿಸುವ ರೈಲಿನ ಕಿಟಕಿಯಿಂದ ಹೊರಗೆಸೆದು ಹತ್ಯೆ ಮಾಡಿರುವ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಹೌರಾ-ಬಾರ್ಬಿಲ್ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಭವಿಸಿದೆ. ರೈಲ್ವೆ ಹಳಿ ಮೇಲೆ ಬಿದ್ದ ಮುಗ್ಧ ಶಿಶು ಸ್ಥಳದಲ್ಲೇ ಛಿದ್ರಗೊಂಡು ದಾರುಣವಾಗಿ ಮೃತಪಟ್ಟಿದೆ.

ಚಕ್ರಧರಪುರ ರೈಲ್ವೆ ವಿಭಾಗದ ರಾಜ್‌ಖರ್ಸವಾನ್ ಮತ್ತು ಮಹಲಿಮ್‌ರೂಪ್ ನಿಲ್ದಾಣಗಳ ನಡುವೆ ಈ ಭೀಕರ ಕೃತ್ಯ ನಡೆದಿದೆ. ರೈಲ್ವೆ ರಕ್ಷಣಾ ಪಡೆ (RPF) ಮಗುವಿನ ಶವವನ್ನು ಪತ್ತೆ ಮಾಡಿದ್ದು, ಆರೋಪಿ ತಾಯಿಯನ್ನು ಬಂಧಿಸಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ರೈಲಿನಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಸೀಟಿನಿಂದ ಎದ್ದ ಮಹಿಳೆ, ತನ್ನ ಕಂಕುಳಲ್ಲಿ ಮಲಗಿದ್ದ ಒಂದೂವರೆ ತಿಂಗಳ ಹಸುಗೂಸನ್ನು ವೇಗವಾಗಿ ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ ಹೊರಗೆಸೆದಿದ್ದಾಳೆ. ಇದನ್ನು ಕಂಡು ಸಹ ಪ್ರಯಾಣಿಕರು ಅರೆಕ್ಷಣ ತಬ್ಬಿಬ್ಬಾಗಿ ತಡೆಯುವಷ್ಟರಲ್ಲೇ, ಆಕೆ ತನ್ನ ಮೂರು ವರ್ಷದ ಮತ್ತೊಂದು ಮಗುವನ್ನೂ ಕಿಟಕಿಯಿಂದ ಹೊರಗೆ ತಳ್ಳಲು ಯತ್ನಿಸಿದ್ದಾಳೆ. ತಕ್ಷಣ ಎಚ್ಚೆತ್ತ ಪ್ರಯಾಣಿಕರು ಮಹಿಳೆಯನ್ನು ಬಲವಂತವಾಗಿ ಹಿಂದಕ್ಕೆ ಎಳೆದು ಹಿಡಿದು, ಆ ಮಗುವಿನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಸಿನಿ ಪೋಸ್ಟ್‌ನ ಆರ್‌ಪಿಎಫ್ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದು ಹಳಿಗಳ ಉದ್ದಕ್ಕೂ ತೀವ್ರ ಶೋಧ ನಡೆಸಿದ್ದಾರೆ. ಸುಮಾರು ಒಂದು ಗಂಟೆಯ ಸತತ ಹುಡುಕಾಟದ ಬಳಿಕ, ಹಳಿಗಳ ಪಕ್ಕದಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಈ ಕರುಣಾಜನಕ ದೃಶ್ಯ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಾರ್ವಜನಿಕರ ಕಣ್ಣಲ್ಲಿ ನೀರು ತರಿಸಿತು.

ಆರೋಪಿ ಮಹಿಳೆಯನ್ನು ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಮಜ್‌ಗಾಂವ್ ನಿವಾಸಿ ಮುದ್ರಾವತಿ ಗೋಪೆ ಅಲಿಯಾಸ್ ಹಸೀನಾ ಬೇಗಂ ಎಂದು ಗುರುತಿಸಲಾಗಿದೆ. ಈಕೆಯ ಪತಿ ಪಶ್ಚಿಮ ಬಂಗಾಳ ಮೂಲದ ಶಹಾಬುದ್ದೀನ್ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಶಹಾಬುದ್ದೀನ್ ನಾಲ್ಕು ವರ್ಷಗಳ ಹಿಂದೆ ಮುದ್ರಾವತಿಯನ್ನು ಅಪಹರಿಸಿದ್ದ ಎನ್ನಲಾಗಿದ್ದು, ಈ ಸಂಬಂಧ ಮಜ್‌ಗಾಂವ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಇಬ್ಬರೂ ವಿವಾಹವಾಗಿ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಯಾವುದೋ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ದಂಪತಿ, ಮಕ್ಕಳೊಂದಿಗೆ ತವರಿಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಚೈಬಾಸಾ ರೈಲ್ವೆ ನಿಲ್ದಾಣದಲ್ಲಿ ದಂಪತಿಯನ್ನು ವಶಕ್ಕೆ ಪಡೆದ ಪೊಲೀಸರು, ತನಿಖೆ ಆರಂಭಿಸಿದ್ದಾರೆ. “ಪ್ರಾಥಮಿಕ ತನಿಖೆಯ ಪ್ರಕಾರ ಮಗುವಿನ ತಾಯಿ ತೀವ್ರ ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ” ಎಂದು ಚೈಬಾಸಾ ರೈಲ್ವೆ ಇನ್ಸ್‌ಪೆಕ್ಟರ್ ಪಿ.ಪಿ. ಸುರಿನ್ ಮಾಹಿತಿ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *