ಜಾಗತಿಕ ಸಂಘರ್ಷದ ನಡುವೆಯೇ ಭಾರತಕ್ಕೆ ತಲುಪಿದ ಇರಾನ್ ಕಚ್ಚಾತೈಲ

ಹೊಸದಿಲ್ಲಿ: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಶಾಂತಿಸ್ಥಾಪನೆ ಪ್ರಯತ್ನಗಳು ಫಲ ನೀಡದೇ ಅನಿಶ್ಚಿತತೆ ಮುಂದುವರಿದಿದ್ದರೂ, ಇರಾನ್ ನಿಂದ ಕಚ್ಚಾತೈಲ ಹೊತ್ತ ಎರಡು ಟ್ಯಾಂಕರ್ ಗಳು ಭಾರತೀಯ ಬಂದರುಗಳಿಗೆ ಬಂದಿಳಿದಿವೆ. 2019ರ ಮೇ ತಿಂಗಳ ಬಳಿಕ ಮೊದಲ ಬಾರಿಗೆ ಇರಾನ್ ಕಚ್ಚಾತೈಲ ಭಾರತವನ್ನು ತಲುಪಿವೆ.
ಕೆಪ್ಲರ್ ಹಡಗು ಟ್ಯಾಕಿಂಗ್ ಸೌಲಭ್ಯದ ಮಾಹಿತಿಯ ಪ್ರಕಾರ, ಭಾರಿ ಗಾತ್ರದ ಕಚ್ಚಾತೈಲ ಹೊತ್ತ ಫಲಿಸಿಟಿ ಟ್ಯಾಂಕರ್ ಸುಮಾರು 20 ಲಕ್ಷ ಬ್ಯಾರಲ್ ತೈಲವನ್ನು ಭಾರತಕ್ಕೆ ಹೊತ್ತು ತಂದಿವೆ. ಇವು ರವಿವಾರ ತಡರಾತ್ರಿ ಗುಜರಾತ್ ಕರಾವಳಿಯ ಸಿಕ್ಕಾ ಬಂದರಿನ ಬಳಿ ಲಂಗರು ಹೂಡಿವೆ. ಇಷ್ಟೇ ಪ್ರಮಾಣದ ಕಚ್ಚಾತೈಲವನ್ನು ಹೊತ್ತು ತಂದಿರುವ ಜಯಾ ಹಡಗು ಇದೇ ವೇಳೆಗೆ ಒಡಿಶಾದ ಪಾರಾದೀಪ್ ಕರಾವಳಿಯನ್ನು ತಲುಪಿದೆ.

ಫಲಿಸಿಟಿ ಹಾಗೂ ಜಯಾ ತೈಲ ಸಾಗಾಣಿಕೆ ಹಡಗುಗಳಿಗೆ ಇರಾನ್ ನ ಅತಿದೊಡ್ಡ ಬಂದರು ಸೌಲಭ್ಯವಾದ ಖರ್ಗ್ ದ್ವೀಪದಲ್ಲಿ ತೈಲ ಭರ್ತಿ ಮಾಡಲಾಗಿದೆ. ದೇಶದ ಒಟ್ಟು ತೈಲ ರಡ್ಡಿನ ಶೇಕಡ 90ರಷ್ಟು ಪಾಲನ್ನು ಇದು ನಿರ್ವಹಿಸುತ್ತದೆ. ಫಲಿಸಿಟಿ ಹಡಗಿನ ಸಂಚಾರ ಮಾರ್ಚ್ ಮಧ್ಯದ ವೇಳೆ ಆರಂಭವಾಗಿದ್ದು ಜಯಾ ಹಡಗು ಫೆಬ್ರುವರಿ ಕೊನೆ ವೇಳೆಗೆ ಅಂದರೆ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷ ಆರಂಭಕ್ಕೆ ಮುನ್ನ ಪ್ರಯಾಣ ಆರಂಭಿಸಿವೆ.
ಆದರೆ ಈ ಎರಡು ಹಡಗುಗಳು ಭಾರತಕ್ಕೆ ಆಗಮಿಸಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಶಿಪ್ಪಿಂಗ್ ಸಚಿವಾಲಯ ತಿಳಿಸಿದೆ.