ಯುದ್ಧ ನಿಲ್ಲಿಸಲು ಇರಾನ್ ಷರತ್ತು: ಟ್ರಂಪ್ ಸಂಧಾನ ಪ್ರಸ್ತಾವನೆ ತಿರಸ್ಕರಿಸಿದ ಟೆಹ್ರಾನ್

ಟೆಹ್ರಾನ್: ತನ್ನ ಷರತ್ತುಗಳನ್ನು ಪೂರೈಸಿದರೆ ಮಾತ್ರ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವುದಾಗಿ ಇರಾನ್ ಹೇಳಿದ್ದು, ಕದನ ವಿರಾಮಕ್ಕೆ ಸಮಯ ನಿಗದಿಪಡಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಪ್ರಯತ್ನವನ್ನು ಬಲವಾಗಿ ತಿರಸ್ಕರಿಸಿದೆ ಎಂದು ವರದಿಯಾಗಿದೆ.
ಬುಧವಾರ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಇರಾನ್ ನ Press TV ವರದಿ ಮಾಡಿದ್ದು, ಯುದ್ಧವನ್ನು ಕೊನೆಗೊಳಿಸುವ ಕುರಿತು ಅಮೆರಿಕದ ಪ್ರಸ್ತಾವನೆಯನ್ನು ಇರಾನ್ ಪರಿಶೀಲಿಸಿದೆ. ಆದರೆ ಅದರ ಷರತ್ತುಗಳು ಸ್ವೀಕಾರಾರ್ಹವಲ್ಲ ಎಂದು ಕಂಡುಕೊಂಡಿದೆ. ಅಮೆರಿಕದ ಪ್ರಸ್ತಾವನೆಗೆ ಇರಾನ್‌ನ ಆರಂಭಿಕ ಪ್ರತಿಕ್ರಿಯೆ ‘ಸಕಾರಾತ್ಮಕವಾಗಿಲ್ಲ’ ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ‘ರಾಯಿಟರ್ಸ್’ ಗೆ ತಿಳಿಸಿದ್ದಾರೆ. ಅದರೂ ಅದು ಪರಿಶೀಲನೆಯಲ್ಲಿದೆ ಎಂದು ತಿಳಿಸಿದೆ.
ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕೆಂಬ ನಿರ್ಧಾರವು ಇರಾನ್‌ಗೆ ಮಾತ್ರ ಬಿಟ್ಟದ್ದು. ಯುದ್ಧ ಅಂತ್ಯದ ಸಮಯವನ್ನು ನಿರ್ದೇಶಿಸಲು ಟ್ರಂಪ್‌ಗೆ ಅವಕಾಶ ನೀಡುವುದಿಲ್ಲ ಮತ್ತು ನಮ್ಮಷರತ್ತುಗಳು ಸಂಪೂರ್ಣವಾಗಿ ಪೂರೈಸಿದಾಗ ಮಾತ್ರ ಯುದ್ಧವನ್ನು ನಿಲ್ಲಿಸಲು ಒಪ್ಪುವುದಾಗಿ ಅದು ಹೇಳಿದೆ.
ತನ್ನ ಎಲ್ಲಾ ಷರತ್ತುಗಳು ಈಡೇರಿಸುವವರೆಗೆ ರಕ್ಷಣಾತ್ಮಕ ಕಾರ್ಯಾಚರಣೆಗಳು ಮುಂದುವರಿಯಲಿದೆ ಎಂದು ಇರಾನ್ ಹೇಳಿದೆ.
ಹಾರ್ಮುಝ್ ಜಲಸಂಧಿ ಮೇಲಿನ ತನ್ನ ಸಾರ್ವಭೌಮತ್ವವನ್ನು ಗುರುತಿಸಬೇಕೆಂದು ಇರಾನ್ ಆಗ್ರಹಿಸಿದೆ. ಅದು ತನ್ನ ನೈಸರ್ಗಿಕ, ಕಾನೂನುಬದ್ಧ ಹಕ್ಕು ಎಂದು ಬಣ್ಣಿಸಿದೆ. ಯುದ್ದದಿಂದ ಉಂಟಾದ ಹಾನಿಗೆ ಯಾರು ಹೊಣೆ ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಬೇಕು ಹಾಗೂ ಪರಿಹಾರದ ಖಾತರಿ ನೀಡಬೇಕು. ಇನ್ನು ಮುಂದೆ ಇಂತಹ ಯುದ್ಧ ಮರುಕಳಿಸುವುದಿಲ್ಲ ಎಂಬ ಸ್ಪಷ್ಟ ಭರವಸೆಗಳನ್ನು ನೀಡಬೇಕು. ಕೇವಲ ಇರಾನ್ ವಿರುದ್ಧದ ಯುದ್ಧವಷ್ಟೇ ಅಲ್ಲ. ಈ ಪ್ರದೇಶದಲ್ಲಿರುವ ಇತರ ಪ್ರತಿರೋಧ ಗುಂಪುಗಳ ವಿರುದ್ಧದ ಶತ್ರುತ್ವವನ್ನೂ ಅಂತ್ಯಗೊಳಿಸಬೇಕು ಎಂದು ಇರಾನ್ ಹೇಳಿದೆ.
