ಹೊಸ ಗೆಳೆಯನೊಂದಿಗೆ ಬಾಳಲು ಪತಿ ಹತ್ಯೆಗೆ ಸ್ಕೆಚ್: ಯುಕೆಯಲ್ಲಿ ಪತ್ನಿ ಮತ್ತು ಪ್ರೇಮಿಗೆ 19 ವರ್ಷಗಳ ಕಠಿಣ ಜೈಲು ಶಿಕ್ಷೆ!

ಲಂಡನ್ : ಯುಕೆಯ ಕಾರ್ಮಾರ್ಥೆನ್‌ಶೈರ್‌ನಲ್ಲಿ ಪತಿಯನ್ನು ಕೊಲೆ ಮಾಡಿ, ಅದನ್ನು ಆತ್ಮಹತ್ಯೆಯೆಂದು ಬಿಂಬಿಸಲು ಭೀಕರ ಸಂಚು ರೂಪಿಸಿದ್ದ 46 ವರ್ಷದ ಮಹಿಳೆ ಮಿಚೆಲ್ ಮಿಲ್ಸ್ ಮತ್ತು ಆಕೆಯ ಪ್ರೇಮಿ ಗೆರೈಂಟ್ ಬೆರ್ರಿಗೆ ನ್ಯಾಯಾಲಯವು ತಲಾ 19 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ವಿಧಿಸಿದೆ. 2024ರಲ್ಲಿ ಪ್ರೇಮಪಾಶಕ್ಕೆ ಸಿಲುಕಿದ್ದ ಈ ಜೋಡಿ, ತಮ್ಮ ಹೊಸ ಜೀವನಕ್ಕೆ ಅಡ್ಡಿಯಾಗಿದ್ದ ಮಿಚೆಲ್ ಪತಿ ಕ್ರಿಸ್ಟೋಫರ್ ಮಿಲ್ಸ್ ಅವರನ್ನು ಹತ್ಯೆ ಮಾಡಲು ನಿರ್ಧರಿಸಿದ್ದರು.


ಸುಮಾರು ಮೂರು ತಿಂಗಳ ಕಾಲ ಇಬ್ಬರೂ ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಾ, ಕ್ರಿಸ್ಟೋಫರ್ ಅವರನ್ನು ಕೊಲ್ಲಲು ವಿವಿಧ ಮಾರ್ಗಗಳನ್ನು ಚರ್ಚಿಸಿದ್ದರು. ಊಟದ ಗ್ರೇವಿಗೆ ಆಂಟಿಫ್ರೀಜ್ ವಿಷ ಬೆರೆಸುವುದು ಅಥವಾ ನಿದ್ರೆಯಲ್ಲಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲ್ಲುವ ಬಗ್ಗೆ ಇವರು ನಡೆಸಿದ್ದ ಸಂಭಾಷಣೆಗಳು ತನಿಖೆಯ ವೇಳೆ ಬಯಲಾಗಿವೆ. ಅಂತಿಮವಾಗಿ ಪತಿಯನ್ನು ಕೊಂದು ಅದನ್ನು ‘ಆತ್ಮಹತ್ಯೆ’ ಎಂದು ತೋರಿಸಲು ಇವರು ಕ್ರೂರವಾದ ಯೋಜನೆಯೊಂದನ್ನು ಸಿದ್ಧಪಡಿಸಿದ್ದರು.

ಈ ಸಂಚಿನ ಭಾಗವಾಗಿ 2024ರ ಸೆಪ್ಟೆಂಬರ್ 20ರಂದು ಗೆರೈಂಟ್ ಬೆರ್ರಿ ತನ್ನ ಸಹಚರ ಸ್ಟೀವನ್ ಥಾಮಸ್ ಎಂಬುವವನನ್ನು ಸೇರಿಸಿಕೊಂಡು ಮುಖವಾಡ ಧರಿಸಿ, ಬಂದೂಕು ಮತ್ತು ಗ್ಯಾಸ್ ಮಾಸ್ಕ್‌ಗಳೊಂದಿಗೆ ಕ್ರಿಸ್ಟೋಫರ್ ಅವರ ಮನೆಗೆ ನುಗ್ಗಿದ್ದನು. ದಾಳಿಕೋರರು ಕ್ರಿಸ್ಟೋಫರ್‌ನನ್ನು ಕಟ್ಟಿಹಾಕಲು ಕೇಬಲ್ ಟೈಗಳನ್ನು ಸಹ ತಂದಿದ್ದರು. ಆದರೆ, ನಿವೃತ್ತ ಯೋಧನಾಗಿದ್ದ ಕ್ರಿಸ್ಟೋಫರ್ ದಾಳಿಕೋರರ ಎದುರು ಎದೆಗುಂದದೆ ವೀರಾವೇಶದಿಂದ ಹೋರಾಡಿದ್ದರು. ಮುಖಕ್ಕೆ ತೀವ್ರವಾದ ಪೆಟ್ಟು ಬಿದ್ದರೂ ಧೈರ್ಯದಿಂದ ಬಂದೂಕುಧಾರಿಗಳನ್ನು ಹಿಮ್ಮೆಟ್ಟಿಸುವಲ್ಲಿ ಅವರು ಯಶಸ್ವಿಯಾದರು. ಘಟನೆಯ ನಂತರ ಪತ್ನಿ ಮಿಚೆಲ್ ಏನೂ ತಿಳಿಯದವಳಂತೆ ಪೊಲೀಸರಿಗೆ ಕರೆ ಮಾಡಿ ನಾಟಕವಾಡಿದ್ದಳು. ಆದರೆ, ಸ್ವಾನ್ಸೀ ಕ್ರೌನ್ ನ್ಯಾಯಾಲಯದಲ್ಲಿ ನಡೆದ ಸುದೀರ್ಘ ವಿಚಾರಣೆಯಲ್ಲಿ ಇವರ ಕೊಲೆ ಸಂಚು ಸಾಬೀತಾದ ಹಿನ್ನೆಲೆಯಲ್ಲಿ, ಮಿಚೆಲ್ ಮತ್ತು ಬೆರ್ರಿಗೆ ತಲಾ 19 ವರ್ಷಗಳ ಶಿಕ್ಷೆ ವಿಧಿಸಲಾಯಿತು. ನ್ಯಾಯದ ಹಾದಿಯನ್ನು ತಪ್ಪಿಸಲು ಯತ್ನಿಸಿದ ಮಿಚೆಲ್ ಹಾಗೂ ಬಂದೂಕು ಹೊಂದಿದ್ದ ಬೆರ್ರಿಗೆ ಹೆಚ್ಚುವರಿ ಶಿಕ್ಷೆಯನ್ನೂ ನ್ಯಾಯಾಲಯ ವಿಧಿಸಿದೆ.
