ಪತ್ನಿ ಮರ್ಯಾದೆ ನೀಡುತ್ತಿಲ್ಲವೆಂದು ಕೊಲೆಗೆ 5 ಲಕ್ಷ ಸುಪಾರಿ ನೀಡಿದ ಪತಿ; ಅಗ್ನಿ ಅವಘಡವೆಂದು ಬಿಂಬಿಸಲು ಹೋಗಿ ಪೊಲೀಸರ ಅತಿಥಿಯಾದ ಕಿರಾತಕರು!

ಮೈಸೂರು :ಮೈಸೂರಿನ ಬಿ.ಎಂ. ಶ್ರೀ ನಗರದಲ್ಲಿ ಮನುಷ್ಯತ್ವವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಲು ಸುಪಾರಿ ನೀಡಿದ ಆಘಾದಕಾರಿ ವಿಚಾರ ಬೆಳಕಿಗೆ ಬಂದಿದೆ. ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಮಹೇಶ್ ಎಂಬಾತನೇ ಈ ಕೃತ್ಯದ ಮಾಸ್ಟರ್ ಮೈಂಡ್ ಆಗಿದ್ದು, ತನ್ನ ಪತ್ನಿ ನಾಗರತ್ನ ತನಗೆ ಸರಿಯಾಗಿ ಮರ್ಯಾದೆ ನೀಡುತ್ತಿಲ್ಲ ಮತ್ತು ಹಣದ ವಿಚಾರದಲ್ಲಿ ಅಸಹಕಾರ ತೋರುತ್ತಿದ್ದಾಳೆ ಎಂಬ ದ್ವೇಷದಿಂದ ಆಕೆಯನ್ನು ಮುಗಿಸಲು ಸ್ಕೆಚ್ ಹಾಕಿದ್ದನು. ಪತ್ನಿ ನಾಗರತ್ನ ಅವರು ಪತಿಯ ಸಂಪಾದನೆಯನ್ನು ಬಡ್ಡಿಗೆ ಬಿಡುತ್ತಿದ್ದರು ಆದರೆ ಮಹೇಶನಿಗೆ ಹಣ ನೀಡುತ್ತಿರಲಿಲ್ಲ ಎನ್ನಲಾಗಿದೆ.


ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಮಹೇಶ್, ಪತ್ನಿಯ ಕೊಲೆಗಾಗಿ ವಿರಾಜಪೇಟೆ ಮೂಲದ ತನ್ನ ಸ್ನೇಹಿತರಾದ ಭಾಸ್ಕರ್ ಮತ್ತು ಅಭಿಷೇಕ್ ಎಂಬುವವರಿಗೆ 5 ಲಕ್ಷ ರೂಪಾಯಿ ಸುಪಾರಿ ನೀಡಿದ್ದನು. ಈ ಕೊಲೆಯನ್ನು ಕೇವಲ ಹತ್ಯೆಯಾಗಿ ಮಾಡದೆ, ಅದೊಂದು ಅಗ್ನಿ ಅವಘಡ ಎಂದು ಜಗತ್ತಿಗೆ ಬಿಂಬಿಸಬೇಕೆಂದು ಕಿರಾತಕ ಯೋಜನೆಯನ್ನು ರೂಪಿಸಿದ್ದನು.

ಮಹೇಶನ ಪ್ಲಾನ್ ಪ್ರಕಾರವೇ ಸುಪಾರಿ ಹಂತಕರು ನಾಗರತ್ನ ಅವರು ಮನೆಯಲ್ಲಿ ಒಬ್ಬರೇ ಇದ್ದ ಸಮಯವನ್ನು ನೋಡಿ ಒಳನುಗ್ಗಿದ್ದಾರೆ. ಮೊದಲಿಗೆ ಆಕೆಯ ತಲೆಗೆ ಸುತ್ತಿಗೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಲು ಯತ್ನಿಸಿದ್ದು, ನಂತರ ಗ್ಯಾಸ್ ಸಿಲಿಂಡರ್ ಪೈಪ್ಗಳನ್ನು ಕತ್ತರಿಸಿ ಅನಿಲ ಸೋರಿಕೆಯಾಗುವಂತೆ ಮಾಡಿ, ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ಭೀಕರ ಘಟನೆಯಲ್ಲಿ ಮನೆಯಲ್ಲಿದ್ದ ಅನೇಕ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ನಾಗರತ್ನ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೇಲ್ನೋಟಕ್ಕೆ ಇದು ಬೆಂಕಿ ಅವಘಡದಂತೆ ಕಂಡರೂ, ಮೇಟಗಳ್ಳಿ ಪೊಲೀಸರು ತನಿಖೆ ನಡೆಸಿದಾಗ ಹಲವು ಅನುಮಾನಗಳು ಮೂಡಿದ್ದವು. ತೀವ್ರ ವಿಚಾರಣೆಯ ನಂತರ ಸ್ವತಃ ಪತಿ ಮಹೇಶ್ ತನ್ನ ಸ್ನೇಹಿತರೊಂದಿಗೆ ಸೇರಿ ಈ ಸಂಚು ರೂಪಿಸಿರುವುದು ದೃಢಪಟ್ಟಿದೆ. ಸದ್ಯ ಪೊಲೀಸರು ಪತಿ ಮಹೇಶ್ ಸೇರಿದಂತೆ ಸುಪಾರಿ ಪಡೆದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
