ಭಬಾನಿಪುರ ಎಣಿಕೆ ಕೇಂದ್ರದ ಬಳಿ ಹೈಡ್ರಾಮಾ: ಬಿಜೆಪಿ-ಟಿಎಂಸಿ ನಡುವೆ ಸಂಘರ್ಷ.

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಬಾನಿಪುರ ಕ್ಷೇತ್ರದಲ್ಲಿ ಇವಿಎಂಗಳನ್ನು ಸಂಗ್ರಹಿಸಿಟ್ಟಿರುವ ಕೇಂದ್ರದ ಆವರಣದೊಳಗೆ ಬಿಜೆಪಿ ಧ್ವಜ ಇದ್ದ ಎರಡು ವಾಹನಗಳಿಗೆ ಅವಕಾಶ ನೀಡಲಾಗಿದೆ ಎಂದು ಟಿಎಂಸಿ ಕಾರ್ಯಕರ್ತರು ಆರೋಪಿಸಿದ ನಂತರ, ಮತ ಎಣಿಕೆ ಕೇಂದ್ರದ ಬಳಿ ಉದ್ವಿಗ್ನತೆ ಉಂಟಾಗಿದೆ.
ಗುರುವಾರ ರಾತ್ರಿ ಸಖಾವತ್ ಸ್ಮಾರಕ ಬಾಲಕಿಯರ ಶಾಲೆಯ ಎಣಿಕೆ ಕೇಂದ್ರದ ಮುಂದೆ ಬ್ಯಾನರ್ಜಿ ಅವರು ನಾಲ್ಕು ಗಂಟೆಗಳ ಕಾಲ ಧರಣಿ ನಡೆಸಿದ ಬೆನ್ನಲ್ಲೇ ಅದೇ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಸ್ಟ್ರಾಂಗ್ ರೂಂಗೆ ಅನಧಿಕೃತವಾಗಿ ವ್ಯಕ್ತಿಗಳು ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿತ್ತು.

ಮತದಾನ ಮುಗಿದ ನಂತರ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ಜಗಳ ತಾರಕಕ್ಕೇರಿದೆ. ಸ್ಟ್ರಾಂಗ್ರೂಂಗಳ ಭದ್ರತೆಯ ಮೇಲೆ ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ನಾಯಕರು ನಿಗಾವಹಿಸಿದ್ದಾರೆ. ಮಮತಾ ಬ್ಯಾನರ್ಜಿ, ಮತ ಎಣಿಕೆ ಮತ್ತು ಇವಿಎಂ ತಿರುಚುವಿಕೆ ಬಗ್ಗೆ ತಮ್ಮ ಆತಂಕಗಳನ್ನು ಪದೇ ಪದೇ ವ್ಯಕ್ತಪಡಿಸಿದ್ದಾರೆ.
ರವಿವಾರ ಬೆಳಿಗ್ಗೆ ಮತ ಎಣಿಕೆ ಕೇಂದ್ರದಿಂದ 100 ಮೀಟರ್ ದೂರದಲ್ಲಿ ಬೀಡುಬಿಟ್ಟಿದ್ದ ಟಿಎಂಸಿ ಕಾರ್ಯಕರ್ತರು, ಬಿಜೆಪಿ ಧ್ವಜಗಳನ್ನು ಹೊಂದಿರುವ ಎರಡು ಕಾರುಗಳು ಆವರಣಕ್ಕೆ ಪ್ರವೇಶಿಸಿ ಸ್ಟ್ರಾಂಗ್ ರೂಂ ಬಳಿ ಹೋಗಿವೆ ಎಂದು ಆರೋಪಿಸಿದರು.
“ಸ್ಥಳದಲ್ಲಿರುವ ಸಿಎಪಿಎಫ್ ಸಿಬ್ಬಂದಿ ಮಾನ್ಯ ಗುರುತಿನ ಪುರಾವೆ ಇಲ್ಲದೆ ಯಾವುದೇ ವಾಹನ ಅಥವಾ ವ್ಯಕ್ತಿಯನ್ನು ಎಣಿಕೆ ಕೇಂದ್ರದ ಆವರಣಕ್ಕೆ ಪ್ರವೇಶಿಸಲು ಅನುಮತಿಸುತ್ತಿಲ್ಲ. ಹಾಗಾದರೆ ಕಳೆದ ಕೆಲವು ದಿನಗಳಿಂದ ನಾವು ನೋಡದ ಈ ಕಾರಿಗೆ ಪ್ರವೇಶವನ್ನು ಹೇಗೆ ಅನುಮತಿಸಲಾಯಿತು? ನಾವು ಪ್ರತಿಭಟಿಸಿದ ನಂತರ, ಕೇಂದ್ರ ಪಡೆಗಳು ನಮ್ಮನ್ನು 100 ಮೀಟರ್ ದೂರ ಸರಿಯುವಂತೆ ಕೇಳಿಕೊಂಡವು” ಎಂದು ಟಿಎಂಸಿ ಕಾರ್ಯಕರ್ತರೊಬ್ಬರು ಆರೋಪಿಸಿದರು.
ಅಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ವಾಹನವನ್ನು ವಾಪಾಸ್ಸು ಕಳುಹಿಸಲಾಗುವುದು ಎಂದು ಭರವಸೆ ನೀಡಿದ್ದರೂ, ಅದು ಸ್ವಲ್ಪ ಸಮಯದವರೆಗೆ ಅಲ್ಲಿಯೇ ಇತ್ತು ಎಂದು ಟಿಎಂಸಿ ಹೇಳಿಕೊಂಡಿದೆ.