ಘಾಝಿಯಾಬಾದ್: ಗೌರ್ ಗ್ರೀನ್ ಅವೆನ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಅಗ್ನಿ ಅವಘಡ; ಸುಟ್ಟು ಕರಕಲಾದ 6 ಫ್ಲ್ಯಾಟ್ ಚಾವಣಿಗಳು

ಘಾಝಿಯಾಬಾದ್: ಬುಧವಾರ ಬೆಳಗ್ಗೆ ಇಂದಿರಾಪುರಂನಲ್ಲಿರುವ ಅಭಯ್ ಖಂಡ್ ಗೌರ್ ಗ್ರೀನ್ ಅವೆನ್ಯೂ ಸೊಸೈಟಿ ಅಪಾರ್ಟ್ ಮೆಂಟ್ ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ಈ ವಸತಿ ಸಂಕೀರ್ಣದ ಸುತ್ತ ದಟ್ಟ ಹೊಗೆ ಆವರಿಸಿದೆ.
my ಈ ಘಟನೆಯಲ್ಲಿ ಸುಮಾರು 5ರಿಂದ 6 ಫ್ಲಾಟ್ ಗಳು ಸುಟ್ಟು ಕರಲಾಗಿದ್ದು, ಇದರಿಂದ ಆಗಿರುವ ಹಾನಿಯ ನಿಖರ ಪ್ರಮಾಣವನ್ನು ಇನ್ನಷ್ಟೇ ನಿರ್ಧರಿಸಬೇಕಿದೆ.
ಬೆಂಕಿಯ ಜ್ವಾಲೆ ಇಡೀ ಕಟ್ಟಡಕ್ಕೆ ಕ್ಷಿಪ್ರವಾಗಿ ವ್ಯಾಪಿಸಿದ ಹಿನ್ನೆಲೆಯಲ್ಲಿ ಈ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದ ನಿವಾಸಿಗಳನ್ನು ತೆರವುಗೊಳಿಸಲಾಗಿದೆ.

“ಈ ಘಟನೆಯಲ್ಲಿ ಯಾವುದೇ ಸಾವುನೋವಾಗಿಲ್ಲ. ಕೆಲವು ವ್ಯಕ್ತಿಗಳು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಅವರನ್ನು ಅಗ್ನಿಶಾಮಕ ಸೇವೆ ಸಿಬ್ಬಂದಿಗಳು ಸುರಕ್ಷಿತವಾಗಿ ತೆರವುಗೊಳಿಸಿದರು. ಈ ಘಟನೆಯಲ್ಲಿ ಒಂಬತ್ತರಿಂದ ಹನ್ನೊಂದನೆ ಮಹಡಿಯಲ್ಲಿ 5ರಿಂದ 6 ಫ್ಯಾಟ್ ಗಳು ಸುಟ್ಟು ಕರಕಲಾಗಿದ್ದು, ಕೆಲವು ಫ್ಲಾಟ್ ಗಳು ಮುಚ್ಚಿವೆ ಹಾಗೂ ಇನ್ನೂ ಕೆಲವು ತೆರೆದಿವೆ” ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಈ ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ, ವಿಸ್ಕೃತ ತನಿಖೆಯ ಬಳಿಕವಷ್ಟೇ ನಿಖರ ಕಾರಣ ತಿಳಿದು ಬರಲಿದೆ.