ಕುವೈತ್ ವಿಮಾನ ನಿಲ್ದಾಣದ ಇಂಧನ ಟ್ಯಾಂಕ್ ಮೇಲೆ ಡ್ರೋನ್ ದಾಳಿ; ಅಗ್ನಿ ಆಕಸ್ಮಿಕ, ಸೀಮಿತ ಹಾನಿ

ಕುವೈತ್: ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷ ಇಡೀ ಮಧ್ಯಪ್ರಾಚ್ಯ ದೇಶಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಕುವೈತ್ ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೈಲ ಟ್ಯಾಂಕ್ ಗೆ ಡೋನ್ ಅಪ್ಪಳಿಸಿದ ಹಿನ್ನೆಲೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ಪ್ರಕಟಿಸಿದೆ.
ಆದರೆ ಈ ದಾಳಿಯಿಂದ “ಸೀಮಿತ ಹಾನಿ”ಯಾಗಿದೆ ಎಂದು ಪ್ರಾಥಮಿಕ ಮಾಹಿತಿಗಳನ್ನು ಉಲ್ಲೇಖಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಆನ್ಸೆನ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಆಂಗೀಕೃತ ತುರ್ತು ವಿಧಿವಿಧಾನಗಳನ್ನು ಅನುಸರಿಸಿದ್ದರಿಂದ ಹೆಚ್ಚಿನ ಹಾನಿ ತಪ್ಪಿದೆ. ಅಗ್ನಿಶಾಮಕ ಸಿಬ್ಬಂದಿಯನ್ನು ಬೆಂಕಿ ಆರಿಸಲು ನಿಯೋಜಿಸಲಾಗಿದೆ ಎಂದು ಏಜೆನ್ಸಿಯ ವಕ್ತಾರ ಅಬ್ದುಲ್ ಅಲ್-ರಜ್ಜಿ ಹೇಳಿದ್ದಾರೆ. ಫೆಬ್ರವರಿ 28ರಂದು ಯುದ್ಧ ಆರಂಭವಾದ ಬಳಿಕ ಕುವೈತ್ ವಿಮಾನ ನಿಲ್ದಾಣದ ಮೇಲೆ ನಿರಂತರವಾಗಿ ದಾಳಿಗಳು ಸಂಭವಿಸುತ್ತಿವೆ.
ಮಾರ್ಚ್ 14ರಂದು ಹಲವು ಡೋನ್ ಗಳು ವಿಮಾನ ನಿಲ್ದಾಣವನ್ನು ಗುರಿ ಮಾಡಿ ದಾಳಿ ಮಾಡಿದ್ದರಿಂದ ರಾಡಾರ್ ವ್ಯವಸ್ಥೆ ಕೆಟ್ಟಿತ್ತು. ಆದರೆ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿದೆ. ಮಾರ್ಚ್ 8ರಂದು ಕೂಡಾ ವಿಮಾನ ನಿಲ್ದಾಣದ ಇಂಧನ ಟ್ಯಾಂಕ್ ಮೇಲೆ ಪ್ರೋನ್ ದಾಳಿ ನಡೆದಿದ್ದು ಅಲ್ಪ ಸ್ವಲ್ಪ ಹಾನಿಯಾಗುವ ಜತೆಗೆ ಪ್ರಯಾಣಿಕರ ಟರ್ಮಿನಲ್ ನಲ್ಲಿದ್ದ ಹಲವು ಮಂದಿಗೆ ಗಾಯಗಳಾಗಿದ್ದವು.
ಇಸ್ರೇಲ್ ಮೇಲೆ ಇರಾನ್ ದಾಳಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ಟೆಹರಾನ್ ಮೇಲೆ ಕ್ಷಿಪಣಿ ಮಳೆಗೆರೆಯಲಾಗುತ್ತಿದೆ ಎಂದು ಇಸ್ರೇಲ್ ಸೇನೆ ಬುಧವಾರ ಮುಂಜಾನೆ ಪ್ರಕಟಿಸಿದೆ. ಟೆಹರಾನ್ ನಲ್ಲಿ ಇರಾನಿಯನ್ ಮೂಲಸೌಕರ್ಯಗಳನ್ನು ಗುರಿ ಮಾಡಿ ದಾಳಿ ಮಾಡಲಾಗುತ್ತಿದೆ ಎಂದು ಟೆಲಿಗ್ರಾಂ ಚಾನಲ್ ನಲ್ಲಿ ಐಡಿಎಫ್ ಪ್ರಕಟಿಸಿದೆ.
ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಪಾರ ಸಾವು ನೋವು ಸಂಭವಿಸಿದೆ ಎಂದು ಹೇಳಲಾಗಿದೆ. ಸಿಡಾನ್ ಸಮೀಪದ ಪರಿಹಾರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ. ಪ್ರತ್ಯೇಕ ಘಟನೆಯಲ್ಲಿ ಅಡ್ಡಾನ್ ಪಟ್ಟಣದ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಮೃತಪಟ್ಟು, ಒಬ್ಬರು ಗಾಯಗೊಂಡಿದ್ದಾರೆ. ಹಶ್ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮೂವರು ಜೀವ ಕಳೆದುಕೊಂಡಿದ್ದಾರೆ.
