ದೊಡ್ಡಬಳ್ಳಾಪುರ: ಮದುವೆ ನಿರಾಕರಿಸಿದ್ದಕ್ಕೆ ಉಪನ್ಯಾಸಕಿಯ ಭೀಕರ ಕೊ*ಲೆ; ಕಾರಿಗೆ ಬೆಂಕಿ ಹಚ್ಚಿ ಪ್ರಿಯಕರನೂ ಆತ್ಮಹ*ತ್ಯೆ

ದೇವನಹಳ್ಳಿ: ಮದುವೆ ಆಗಲು ನಿರಾಕರಿಸಿದ ಕಾರಣಕ್ಕೆ ತನ್ನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಭೀಕರವಾಗಿ ಕೊಲಗೈದ ಬಳಿಕ ವ್ಯಕ್ತಿಯೋರ್ವ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದ ಬಳಿ ನಡೆದಿದೆ. ಸರೋಜಾ (40) ಕೊಲೆಯಾದ ಮಹಿಳೆಯಾಗಿದ್ದು, ಬಳಿಕ ರೈಲಿಗೆ ತಲೆಕೊಟ್ಟು ಪ್ರಾಣಬಿಟ್ಟಿರುವ ವ್ಯಕ್ತಿಯನ್ನು ರಾಮಾಂಜಿ(45) ಎಂದು ಗುರುತಿಸಲಾಗಿದೆ.

ಕೊಲೆ ಮಾಡಿ ಕಾರಿಗೆ ಬೆಂಕಿ
ದೇವನಹಳ್ಳಿ ಬಳಿಯ ಖಾಸಗಿ ಕಾಲೇಜೊಂದರ ಅತಿಥಿ ಉಪನ್ಯಾಸಕಿಯಾಗಿದ್ದ ಸರೋಜಾ ಮತ್ತು ರಾಮಾಂಜಿ ಕಳೆದೊಂದು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದರು. ಗಂಡನಿಗೆ ಡಿವೋರ್ಸ್ ಕೊಟ್ಟು ಸರೋಜಾ ರಾಮಾಂಜಿ ಸಂಪರ್ಕದಲ್ಲಿದ್ದಳು. ಈ ನಡುವೆ ಇಬ್ಬರೂ ಮದುವೆಯಾಗೋಣ ಎಂದು ಸರೋಜಾಗೆ ರಾಮಾಂಜಿ ಹೇಳಿದ್ದ. ಆದರೆ ಇದಕ್ಕೆ ಸರೋಜಾ ವಿರೋಧ ವ್ಯಕ್ತಪಡಿಸಿದ್ದಳು. ಈ ನಡುವೆ ಆಕೆಯನ್ನು ಲಾಂಗ್ ಡ್ರೈವ್ಗೆ ಎಂದು ಕರೆದುಕೊಂಡು ಬಂದಿದ್ದ ಆರೋಪಿ, ಸರೋಜಾಳನ್ನು ಕೊಂದು ಕಾರಿಗೂ ಬೆಂಕಿ ಹಚ್ಚಿದ್ದ ಎಂಬುದು ಗೊತ್ತಾಗಿದೆ.
ಪೂರ್ವಯೋಜಿತ ಕೊಲೆ
ಸೋಷಿಯಲ್ ಮೀಡಿಯಾ ಮೂಲಕ ಪರಿಚಿತವಾಗಿದ್ದ ಸರೋಜಾ ಮದುವೆಗೆ ನಿರಾಕರಿಸಿದ ಕಾರಣ ಆಕೆ ವಿರುದ್ಧ ರಾಮಾಂಜಿ ಸಿಟ್ಟುಗೊಂಡಿದ್ದ. ಹೀಗಾಗಿ ಕೊಲೆ ಬಗ್ಗೆ ಮೊದಲೇ ನಿರ್ಧಾರ ಮಾಡಿ ಆಕೆಯನ್ನು ತನ್ನ ಜೊತೆಗೆ ಕರೆದುಕೊಂಡು ಬಂದಿದ್ದ. ಮಹಿಳೆಯನ್ನು ಕೊಂದ ಬಳಿಕ ಆರೋಪಿ ಎಸ್ಕೇಪ್ ಆಗಿದ್ದ ಹಿನ್ನೆಲೆ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಇಳಿದಿದ್ದರು. ಈ ವೇಳೆ ಮತ್ತೊಂದು ಶಾಕಿಂಗ್ ವಿಚಾರ ಬಯಲಾಗಿದ್ದು, ಸರೋಜಾ ಕೊಲೆ ಬಳಿಕ ಆರೋಪಿ ರಾಮಾಂಜಿ ಕೂಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗೊತ್ತಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.