ಬೆಂಗಳೂರಿನಲ್ಲಿ ಮತ್ತೆ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್: ವೃದ್ಧನಿಗೆ 1.77 ಕೋಟಿ ರೂ. ವಂಚನೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮತ್ತೆ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ (Digital Arrest Scam) ಸದ್ದು ಮಾಡಿದೆ. ಸೈಬರ್ ವಂಚಕರು ವೃದ್ಧರೊಬ್ಬರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚಿಸಿ (Cyber Crime), ಬರೋಬ್ಬರಿ 1.77 ಕೋಟಿ ರೂ.ಯನ್ನು ಪೀಕಿದ್ದಾರೆ.

ಸದಾನಂದ ನಗರ ಬಳಿಯ ಎನ್‌ಜಿಎಫ್ ಲೇಔಟ್ ನಿವಾಸಿ ಜಿ.ವಸಂತ್ ಕುಮಾರ್ (81) ವಂಚನೆಗೆ ಒಳಗಾದ ವ್ಯಕ್ತಿ. ವೃದ್ಧ ತಮಗಾದ ವಂಚನೆಯ ಬಗ್ಗೆ ಪೂರ್ವ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಸಂತ್ ಕುಮಾರ್ ಅವರಿಗೆ ಸಂದೀಪ್ ಜಾಧವ್ ಎಂಬಾತ ಜುಲೈ 5ರಂದು ಮುಂಬೈನ ಕೊಲಾಬಾ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ಬೆದರಿಸಿದ್ದ.
ಸಂದೀಪ್, ತಮ್ಮ ಆಧಾರ್ ಸಂಖ್ಯೆ ಬಳಸಿಕೊಂಡು ಬ್ಯಾಂಕ್ ಖಾತೆ ತೆರೆಯಲಾಗಿದೆ. ಜೆಟ್ ಏರ್‌ವೇಸ್‌ನ ನರೇಶ್ ಗೋಯಲ್ ಎಂಬಾತನ ಹೆಸರಿಗೆ ತಮ್ಮ ಬ್ಯಾಂಕ್ ಹಣದ ಅಕ್ರಮ ವರ್ಗಾವಣೆಯಾಗಿದೆ ಎಂದು ವಸಂತ್ ಕುಮಾರ್ ಅವರಿಗೆ ಹೆದರಿಸಿದ್ದ. ಬಳಿಕ ಕೆಲ ವ್ಯಕ್ತಿಗಳು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ವಸಂತ್ ಕುಮಾರ್ ಅವರಿಗೆ ಕರೆ ಮಾಡಿ, ಜುಲೈ 9ರಿಂದ 15ರವರೆಗೆ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ಮಾತ್ರವಲ್ಲದೇ ವಾಟ್ಸಾಪ್ ವಿಡಿಯೋ ಕರೆಯ ಮೂಲಕ ನಕಲಿ ಬಂಧನದ ವಾರಂಟ್ ತೋರಿಸಿ ಬೆದರಿಸಿದ್ದಾರೆ.
ಬಂಧನದ ವಾರಂಟ್ ನೋಡಿ ಭಯಗೊಂಡ ವಸಂತ್ ಕುಮಾರ್, ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ವಂಚಕರಿಗೆ ನೀಡಿದ್ದಾರೆ. ನಂತರ ವಂಚಕರು ವಸಂತ್ ಕುಮಾರ್ ಗೆ ಪರಿಶೀಲನೆಯ ನೆಪ ಒಡ್ಡಿ, ಖಾತೆಯಲ್ಲಿರುವ ಎಲ್ಲಾ ಹಣವನ್ನು ಬೇರೊಂದು ಖಾತೆಗೆ ಹಾಕುವಂತೆ ತಿಳಿಸಿದ್ದಾರೆ. ಹೀಗಾಗಿ ವಸಂತ್ ಕುಮಾರ್ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಎಲ್ಲಾ 1.77 ಕೋಟಿ ರೂ. ಹಣವನ್ನು ವಂಚಕರು ಹೇಳಿದ ಖಾತೆಗೆ ಹಂತಹಂತವಾಗಿ ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ.
ಇಷ್ಟಾದ ಬಳಿಕ ವಂಚಕರು ತಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ತಾವು ವಂಚನೆಗೆ ಒಳಗಾಗಿರುವ ಬಗ್ಗೆ ವಸಂತ್ ಕುಮಾರ್‌ಗೆ ತುಂಬಾ ತಡವಾಗಿ ತಿಳಿದಿದೆ. ತಮ್ಮನ್ನು ಒಂದು ವಾರ ಡಿಜಿಟಲ್ ಬಂಧನದಲ್ಲಿಟ್ಟು 1.77 ಕೋಟಿ ರೂ. ವಂಚಿಸಿದ್ದಾರೆ ಎಂದು ಪೊಲೀಸರಿಗೆ ಅವರು ದೂರು ನೀಡಿದ್ದಾರೆ. ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆಯೂ ಹಣ ವಾಪಸ್ ಕೊಡಿಸುವಂತೆಯೂ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇನ್ನು ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಆನ್‌ಲೈನ್‌ನಲ್ಲಿ ನಕಲಿ ಕಾನೂನು ಸೇವೆ ಒದಗಿಸುತ್ತಿದ್ದ ಬೃಹತ್ ಜಾಲವನ್ನೇ ಪತ್ತೆ ಮಾಡಿದ್ದಾರೆ. ರಾಮಮೂರ್ತಿ ನಗರದ ನಿವಾಸಿಯೊಬ್ಬರಿಗೆ ಸೋಲಾರ್ ಪ್ಲಾಂಟ್ ಅಳವಡಿಸುವುದಾಗಿ ನಂಬಿಸಿ ಒಂದೂವರೆ ಕೋಟಿ ರೂ. ವಂಚನೆ ಆಗಿತ್ತು. ಘಟನೆಯ ಬಳಿಕ ಹಣ ಕಳೆದುಕೊಂಡ ವ್ಯಕ್ತಿ ಆನ್‌ಲೈನ್‌ನಲ್ಲಿ ಕಾನೂನು ಸೇವೆಗೆ ಹುಡುಕಾಟ ನಡೆಸಿದ್ದಾರೆ.
ಆಗ Quickmoto legal service ಎಂಬ ವೆಬ್‌ಸೈಟ್ ನಿಂದ ವ್ಯಕ್ತಿಗೆ ಸಂಪರ್ಕ ಆಗಿದೆ. ನಂತರ ಲೀಗಲ್ ಸರ್ವಿಸ್ ಎಂದು ಟೆಲಿಕಾಲರ್ ಗಳ ಮೂಲಕ ವ್ಯಕ್ತಿಯೊಂದಿಗೆ ವಂಚಕರು ಮಾತನಾಡಿದ್ದಾರೆ. ವ್ಯಕ್ತಿ ತಾವು ವಂಚನೆಗೆ ಒಳಗಾಗಿರುವ ಬಗ್ಗೆ ತಿಳಿಯದೇ ಹಂತ ಹಂತವಾಗಿ ಹನ್ನೆರಡುವರೆ ಲಕ್ಷ ರೂ. ಹಣವನ್ನು ನೀಡಿದ್ದಾರೆ. ತಾವು ಮತ್ತೆ ವಂಚನೆಗೆ ಒಳಗಾಗಿರುವುದನ್ನು ಅರಿತ ವ್ಯಕ್ತಿ ಈ ಬಗ್ಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
